ವೀರಾಜಪೇಟೆ, ನ.2 : ಇಂದಿನ ಯುವಕರಲ್ಲಿ ದೇಶವನ್ನು ಸದೃಢವಾಗಿ ಕಟ್ಟುವ ಸಾವiಥ್ರ್ಯವಿದೆ. ಸ್ವಾಮಿ ವಿವೇಕಾನಂದರ ಕನಸಿನ ಭಾರತವನ್ನು ನೆನಸಾಗಿಸಲು ದೇಶದ ಯುವ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂತನವಾಗಿ ರಚಿಸಲಾದ ಜೀವನಜ್ಯೋತಿ ಯುವಕ ಸಂಘವನ್ನು ಕನ್ನಡದ ಧ್ವಜಾರೋಹಣ ಮಾಡಿ ಉದ್ಘಾಟಿಸಿದ ಸಂಕೇತ್ ಪೂವಯ್ಯ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸಹೋದರ ಭಾವನೆಯಿಂದ ಕಂಡು ಯುವ ಸಂಘಟನೆಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಎಲ್ಲರೂ ಸಮಾನತೆಯ ಸಂಕಲ್ಪದೊಂದಿಗೆ ಉತ್ತಮ ಸಮಾಜದ ಕಲ್ಪನೆಯೊಂದಿಗೆ ಮಾದರಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ವೀರಾಜಪೇಟೆ ತೆಲುಗರ ಬೀದಿಯ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಮಲೆತಿರಿಕೆಬೆಟ್ಟದ ಶನೀಶ್ವರ ಭಕ್ತ ಜನ ಮಂಡಳಿಯಿಂದ ಜಿಲ್ಲೆಯಲ್ಲಿ ಕನ್ನಡದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಿ.ಸರ್ವೀನ್ ಜಾಯ್ ಹಾಗೂ ಈ ತನಕ 216 ಮೃತದೇಹಗಳನ್ನು ಹೊಳೆಯಿಂದ ತೆಗೆದ ಹಾಗೂ ನೀರಿನಲ್ಲಿ ಮುಳುಗಿದ್ದ 4 ಮಂದಿಯ ಜೀವವನ್ನು ರಕ್ಷಿಸಿದ ಮುಳುಗು ತಜ್ಞ ಸಿದ್ಧಲಿಂಗ ಸ್ವಾಮಿ ಅವರುಗಳಿಗೆ ಸಂಕೇತ್ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ವನಿತ್ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘಟನೆಯ ಪದಾಧಿಕಾರಿಗಳಾದ ಅಜಯ್ ನಾರಾಯಣರಾವ್, ಯುವರಾಜ್ ಕೃಷ್ಣ, ಎಂ.ಕೆ.ನಿತೀನ್, ಟಿ.ಡಿ.ಲೋಕೇಶ್, ಧನುಶ್, ಎ.ಎ.ಪುರುಷೋತ್ತಮ್, ಸಿ.ಜೆ.ಜಾಯ್ ಹಾಜರಿದ್ದರು.