ಕುಶಾಲನಗರ, ಜ. 3: ಅಂಬೇಡ್ಕರ್‍ವಾದ ಮೂಲಕ ಜಾತಿಬೇಧ ರಹಿತ ಸಮಾಜ ನಿರ್ಮಾಣವಾಗಬೇಕಾದಲ್ಲಿ ಒಡೆದು ಹೋಗಿರುವ ಜಾತಿಗಳನ್ನು ಸೇರಿಸುವ ಪ್ರಯತ್ನವಾಗಬೇಕಾಗಿದೆ ಎಂದು ಅಂಬೇಡ್ಕರ್ ವಿಚಾರವಾದಿ ಹಾಗೂ ಬರಹಗಾರ ಹೋ.ಬ.ನಾಗ ಸಿದ್ದಾರ್ಥ ಹೊಲೆಯಾರ್ ಅಭಿಪ್ರಾಯ ಪಟ್ಟರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನಿವೃತ್ತ ನೌಕರರ ಸಂಘ, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕೋರೆಗಾಂವ್ ಯುದ್ಧದ ವಿಜಯೋತ್ಸವದ ನೆನಪಿನ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಾಕಾರರಾಗಿ ಪಾಲ್ಗೊಂಡು ಮಾತನಾಡಿದರು. ಜಾತಿ - ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಮಾಜದಲ್ಲಿ ಸಹೋದರತ್ವ, ಭ್ರಾತೃತ್ವ ಮರೆತುಹೋದಂತಾಗಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಡಿಕೇರಿ ಜಿಲ್ಲಾಸ್ಪತ್ರೆ ಉಪಮುಖ್ಯ ವೈದ್ಯಾಧಿಕಾರಿ ಡಾ.ಹೆಚ್.ವಿ. ದೇವ ದಾಸ್ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣ ಹೊಂದುವದರೊಂದಿಗೆ ವ್ಯವಸ್ಥೆಯ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವ ಅವಶ್ಯಕತೆ ಎದುರಾಗಿರುವದಾಗಿ ತಿಳಿಸಿದರು.
ನಿವೃತ್ತ ಅಪರ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಮತ್ತು ನ್ಯಾಯಾಧೀಶ ಮೋಹನ್‍ಪ್ರಭು ಉಪಸ್ಥಿತರಿದ್ದು, ಕಾನೂನು ಅರಿವು ಮಾಹಿತಿ ಒದಗಿಸಿದರು.