ಸೋಮವಾರಪೇಟೆ, ಜು. 20: ತಾಲೂಕಿನ ಯಡವನಾಡು ಗಿರಿಜನ ಹಾಡಿಗೆ ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿ ಹಾಡಿವಾಸಿಗಳ ಬದುಕಿನ ಬವಣೆ ವೀಕ್ಷಿಸಿದರಲ್ಲದೆ, ಇವರುಗಳ ಸಂಕಷ್ಟವನ್ನು ಪರಿಹರಿಸಲು ಸರ್ಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು.
ಸಮೀಪದ ಬೇಳೂರು ಮಠದ ಆವರಣದಲ್ಲಿ ನಡೆಯುತ್ತಿರುವ ಚಿಂತನಾ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ರಾಜ್ಯದ ವಿವಿಧ ಮಠಾಧೀಶರುಗಳಿಗೆ ಅರಣ್ಯ ವಾಸಿಗಳ ಜೀವನ ಶೈಲಿಯ ಅರಿವು ಹಾಗೂ ಹಾಡಿವಾಸಿಗಳಿಗೆ ದುಶ್ಚಟಗಳ ಕುರಿತ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಯಡವನಾಡು ಗಿರಿಜನ ಹಾಡಿಗೆ ಭೇಟಿ ನೀಡಿದರು. ಈ ಸಂದರ್ಭ ಹಾಡಿಯ ಪ್ರಮುಖರಾದ ರವಿ ಮತ್ತಿತರರು ಅರಣ್ಯ ಇಲಾಖೆ ಗಿರಿಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದು, ತಮ್ಮಂತಹ ಮಠಾಧಿಪತಿಗಳು ಸರ್ಕಾರದ ಗಮನ ಸೆಳೆದು ನಮಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ಅರಣ್ಯ ಪ್ರದೇಶಗಳಲ್ಲೇ ಹೆಚ್ಚಾಗಿ ವಾಸಿಸುತ್ತಿರುವ ಗಿರಿಜನರು ಸಾಕಷ್ಟು ಸಂಕಷ್ಟಗಳನ್ನೆದುರಿಸುತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಬರಬೇಕು ಎಂದರು. ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಪ್ರಯತ್ನ ನಡೆದಿರುವ ಬಗ್ಗೆ ಹಾಡಿವಾಸಿಗಳು ಸ್ವಾಮೀಜಿಗಳ ಗಮನ ಸೆಳೆದ ಸಂದರ್ಭ, ಈ ಬಗ್ಗೆ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವದಾಗಿ ತಿಳಿಸಿದರು.
ಅರಣ್ಯ ವಾಸಿಗಳು ಮೊದಲು ಜಾಗೃತರಾಗಬೇಕು. ದುಶ್ಚಟಗಳನ್ನು ಕೈಬಿಟ್ಟು ಉತ್ತಮ ಜೀವನ ಸಾಗಿಸಬೇಕು. ಮಕ್ಕಳನ್ನು ಜೀತಕ್ಕಿಡಬೇಡಿ. ಅವರಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ತಿಳಿ ಹೇಳಿದರು. ಸರ್ಕಾರಗಳೂ ಇಂತಹವರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದ ಅವರು ಇಂತಹ ಅರಣ್ಯ ವಾಸಿಗಳ ಮಕ್ಕಳಿಗೆ ಉದ್ಯೋಗ ಒದಗಿಸಬೇಕು. ಆಗ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಅರಣ್ಯ ವಾಸಿಗಳ ಜೀವನ ಸುಧಾರಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು ಹುಣಸೂರು ಸಮೀಪದ ಹಾಡಿಗೆ ಭೇಟಿ ನೀಡಿ ಅವರೊಡನೆ ಸಹಭೋಜನ ಮಾಡಿದ್ದೇವೆ. ಇಲ್ಲಿನ ಹಾಡಿಗೂ ಈ ಹಿಂದೆ ಭೇಟಿ ನೀಡಿದ್ದೇವೆ. ಇಲ್ಲಿನ ಜನರ ಸಮಸ್ಯೆಯನ್ನು ಅರಿತಿದ್ದೇವೆ. ಇಲ್ಲಿನ ಜನತೆ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇವರ ಆಚಾರ, ವಿಚಾರ, ಗಮನಾರ್ಹವಾದದ್ದು, ಸಮಾಜದ ಕಟ್ಟಕಡೆಯಲ್ಲಿರುವ ಇಂತಹ ಸಮುದಾಯ ಮುಖ್ಯ ವಾಹಿನಿಗೆ ಬರಬೇಕೆಂಬುದು ನಮ್ಮ ಆಶಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಾಡಿಯ ಮಕ್ಕಳಿಗೆ ಸಿಹಿ ತಿನಿಸಿ, ಆಶ್ರಮ ಶಾಲೆಯ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಿಸಿ ಆಶೀರ್ವದಿಸಿದರು. ಈ ಸಂದರ್ಭ ಸ್ವಾಮೀಜಿಗಳಿಗೆ ಹಾಡಿಯ ನಿವಾಸಿಗಳು ನಮಸ್ಕರಿಸಲು ಬಂದಾಗ ಅವರ ಜೇಬಿನಲ್ಲಿ ಬೀಡಿ ಇರುವದನ್ನು ಗಮನಿಸಿದ ಶ್ರೀಗಳು ಅವುಗಳನ್ನು ತೆಗೆದು ಇಂತಹ ದುಶ್ಚಟಗಳನ್ನು ಮುಂದುವರಿಸದಂತೆ ತಿಳಿಸಿ ಅವುಗಳನ್ನು ನಾಶಪಡಿಸಿದರು. ಪಾಂಡುಮಟ್ಟಿ ಮಠಾಧೀಶರಾದ ಗುರುಬಸವ ಸ್ವಾಮೀಜಿ, ಹೆಬ್ಬಾಲು ಮಠದ ರುದ್ರಮುನಿ ಸ್ವಾಮೀಜಿ, ಛಲವಾದಿ ಪೀಠದ ನಾಗಿದೇವ ಸ್ವಾಮೀಜಿ, ಕನಕ ಗುರು ಪೀಠದ ಸಿದ್ದರಮಾನಂದ ಪುರಿ ಸ್ವಾಮೀಜಿ, ರಾವಂದೂರು ಮೋಕ್ಷಪತಿ ಸ್ವಾಮೀಜಿ, ಭೋವಿಗುರು ಪೀಠದ ಇಮ್ಮಡಿ ಸಿದ್ದ ರಾಮ ಸ್ವಾಮೀಜಿ, ವಣಕಲು ಮಠಾಧೀಶ ಬಸವ ರಾಮಾನಂದ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು ಹಾಜರಿದ್ದರು.