ಸಿದ್ದಾಪುರ, ಡಿ. 22: ಮಾಲ್ದಾರೆ ಸಮೀಪದ ದಿಡ್ಡಳ್ಳಿ ಪ್ರದೇಶದಲ್ಲಿ, ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 15ನೇ ದಿನದ ಆದಿವಾಸಿಗಳ ಪ್ರತಿಭಟನೆಯು ಮೌನದಲ್ಲಿ ಮುಂದುವರಿಯಿತು. ಎಂದಿನಂತೆ ಯಾವದೇ ಕ್ರಾಂತಿ ಗೀತೆಗಳಾಗಲೀ, ಧಿಕ್ಕಾರ ಘೋಷಣೆಯಾಗಲೀ ಕಂಡು ಬರಲಿಲ್ಲ. ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ಆದಿವಾಸಿಗಳ ಮುಖಗಳು ಕಳೆಗುಂದಿತ್ತು. ಹಿಂದಿನ ಆವೇಶಗಳು ಕಂಡು ಬರಲಿಲ್ಲ. ಮುಂದೇನು ಆಗಬಹುದು ಎಂಬ ಕಾತರ ಗೋಚರಿಸುತ್ತಿತ್ತು.
ದಿಡ್ಡಳ್ಳಿ ಹಾಗೂ ಚೆನ್ನಂಗಿ ಮಾಲ್ದಾರೆ ಸಮೀಪದಲ್ಲಿ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರತಿ ವಾಹನಗಳನ್ನು ವೀಡಿಯೋ ಮಾಡುವ ಮೂಲಕ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆಶ್ರಮ ಶಾಲೆಯ ಎದುರಿನಲ್ಲಿ ಸುತ್ತಲೂ 9 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅಲ್ಲದೆ, ಪ್ರತಿಭಟನೆ ಸ್ಥಳಕ್ಕೆ ಬರುವ ಸಂಘಟನೆಗಳ ಮುಖಂಡರುಗಳಿಗೆ ಹೆಚ್ಚಿನ ಸಮಯ ಸ್ಥಳದಲ್ಲಿ ಇರಲು ಅವಕಾಶ ನೀಡದೆ ಕೂಡಲೇ ತೆರಳುವಂತೆ ಸೂಚನೆಯನ್ನು ನೀಡುತ್ತಿದ್ದುದು ಕಂಡುಬಂದಿತು. ಶಾಲೆಯ ಒಳಕ್ಕೆ ತೆರಳದಂತೆ ಹಾಗೂ ಅಪರಿಚಿತ ವ್ಯಕ್ತಿಗಳು ಬಾರದಂತೆ ನಾಮಫಲಕಗಳನ್ನು ಪೊಲೀಸರು ಅಳವಡಿಸಿದ್ದಾರೆ.
(ಮೊದಲ ಪುಟದಿಂದ) ರಾಜ್ಯ ರೈತ ಸಂಘದ ಮುಖಂಡರುಗಳು ದಿಡ್ಡಳ್ಳಿಗೆ ಭೇಟಿ ನೀಡಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಲಪುರ ನಾಗೇಂದ್ರ ಮಾತನಾಡಿ, ಆದಿವಾಸಿಗಳು ದೇಶದ ಮೂಲ ನಿವಾಸಿಗಳು, ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಿರುವ ಕ್ರಮ ಖಂಡನೀಯ. ಕಾಡಿನ ಮಕ್ಕಳಿಗೆ ಈ ಸ್ಥಿತಿ ಬರಬಾರದಿತ್ತು ಎಂದು ವಿಷಾದಿಸಿದರು.
ಈ ಸಂದರ್ಭ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ, ಎಂ. ರಾಮು, ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಲೋಕೇಶ್ರಾಜ್, ಸತೀಶ್ಚಂದ್ರ ರೈ ಬಂಬ್ಯಾಲ ಹಾಜರಿದ್ದರು.
ಪ್ರತಿಭಟನಾ ಸ್ಥಳದಲ್ಲಿ ಆಗಂತುಕರ ಚಲನವಲನದ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರದಿಂದ ನಕ್ಸಲ್ ನಿಗ್ರಹ ದಳ ಗಸ್ತು ತಿರುಗುತ್ತಿದ್ದು, ಮಡಿಕೇರಿ ಡಿವೈಎಸ್ಪಿ ಛಬ್ಬಿ, ವೃತ್ತ ನಿರೀಕ್ಷಕ ಮೇದಪ್ಪ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ.