ಕುಶಾಲನಗರ, ಜ. 17: ದುಬಾರೆ ಸಾಕಾನೆ ಶಿಬಿರಕ್ಕೆ ವಿನಾಕಾರಣ ಪ್ರವಾಸಿಗರನ್ನು ಒಯ್ಯುತ್ತಿರುವ ಮೋಟಾರ್ ಬೋಟುಗಳನ್ನು ವಶಕ್ಕೆ ಪಡೆದು ಅವುಗಳ ಮಾಲೀಕರ ವಿರುದ್ಧ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸಾಕಾನೆ ಶಿಬಿರದಲ್ಲಿ ಆನೆಗಳ ಲಭ್ಯತೆ ಇಲ್ಲದಿದ್ದರೂ ಖಾಸಗಿ ಬೋಟ್ ಮಾಲೀಕರು ಪ್ರವಾಸಿಗರನ್ನು ಒಯ್ದು ಶಿಬಿರದಲ್ಲಿ ತುಂಬಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದುಬಾರೆಗೆ ಭೇಟಿ ನೀಡಿದ ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ನಿರ್ದೇಶನ ನೀಡಿದರು.
ಅರಣ್ಯ ಇಲಾಖೆಯ ಮೋಟಾರ್ ಬೋಟುಗಳು ಸೇರಿದಂತೆ 5 ಬೋಟುಗಳು ಪ್ರವಾಸಿಗರನ್ನು ಒಯ್ಯುತ್ತಿದ್ದು, ಇಲಾಖೆಯು ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಅವಕಾಶ ಕಲ್ಪಿಸಬೇಕೆ ಹೊರತು ಇತರ ಸಮಯಗಳಲ್ಲಿ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕುಶಾಲನಗರ ವಲಯ ಅರಣ್ಯಾಧಿಕಾರಿ ನೆಹರು ಅವರಿಗೆ ಸಿಸಿಎಫ್ ಸ್ಥಳದಲ್ಲೇ ಆದೇಶ ನೀಡಿದ್ದು, ಖಾಸಗಿ ಬೋಟ್ ಮಾಲೀಕರ ಮೇಲೆ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದ್ದಾರೆ.