ಕುಶಾಲನಗರ, ಜ. 8: ಕೊಡಗು ಜಿಲ್ಲೆಯ ಉದ್ಯಮಿಗಳು ಸರಕು ಸಾಮಗ್ರಿಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳಲು ಅನುಕೂಲ ಕಲ್ಪಿಸಲು ಸಹಕಾರಿಯಾಗುವಂತೆ ಶೀಘ್ರವಾಗಿ ಮೈಸೂರು-ಮಂಗಳೂರು ಚತುಷ್ಪಥ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸಾರಿಗೆ ಸಚಿವಾಲಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ನವ ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಪಿ.ಸಿ.ಪರೀದ ಹೇಳಿದರು.

ಈ ಹಿನೆÀ್ನಲೆಯಲ್ಲಿ ಮೈಸೂರು, ಮಡಿಕೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರದಿಂದ ಅನುಮೋದನೆ ದೊರೆತಿದ್ದು, ಸಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿಯನ್ನು ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕುಶಾಲನಗರ ಸಮೀಪದ ಪರ್ಪಲ್ ಪಾಲ್ಮ್ ಹೊಟೇಲ್ ಸಭಾಂಗಣದಲ್ಲಿ ನವ ಮಂಗಳೂರು ಬಂದರು ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಯುಕ್ತಾಶ್ರಯದಲ್ಲಿ ನಡೆದ ಕುಶಾಲನಗರ, ಚಿಕ್ಕಮಗಳೂರು ಮತ್ತು ಹಾಸನ ವಲಯದ ವ್ಯಾಪಾರೋದ್ಯಮಿ ಗಳ ಭೇಟಿ ಹಾಗೂ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸಕ್ತ ವರ್ಷ ನವ ಮಂಗಳೂರು ಬಂದರಿನಿಂದ 36 ದಶಲಕ್ಷ ಟನ್ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. 2016-17ನೇ ಹಣಕಾಸು ವರ್ಷದ ಅಂತ್ಯದಲ್ಲಿ 40 ದಶಲಕ್ಷ ಟನ್ ಕಾಫಿ ರಫ್ತು ಗುರಿ ಹೊಂದಲಾಗಿದೆ ಎಂದು ವಿವರ ಒದಗಿಸಿದರು.ನವ ಮಂಗಳೂರು ಬಂದರು ಕರ್ನಾಟಕ ರಾಜ್ಯದಿಂದ ಸಮುದ್ರ ದಾರಿಯ ಹೆದ್ದಾರಿಯಾಗಿದ್ದು, ಪಶ್ಚಿಮ ಕರಾವಳಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಬಂದರು ಕೇಂದ್ರವಾಗಿದೆ. ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುವ ಬಂದರಿನ ಪ್ರವೇಶದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಬಂದರಿನಲ್ಲಿ 300 ಮಂದಿ ನೌಕರರು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ಬಂದರಿನಲ್ಲಿ ಸರಕು ಶೇಖರಣೆಗೆ ಆಧುನಿಕ ಶೈಲಿಯ ಉಗ್ರಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರಗಳನ್ನು ಹೊಂದಿರುವ ಬಂದರಿನಲ್ಲಿ ಸಂಸ್ಕರಣ ವಿಧಾನ ಗಳಿಂದ ಕಾಫಿಯ ಗುಣಮಟ್ಟ ವನ್ನು ಕಾಯ್ದುಕೊಳ್ಳುವದರ ಜೊತೆಗೆ ರಫ್ತು ಮಾಡಲು ಸಹಕಾರಿಯಾಗಿದ್ದು, ಉದ್ಯಮಿಗಳು ತಮ್ಮ ಕಂಪನಿಗಳ ಸರಕು ಸಾಮಗ್ರಿಗಳನ್ನು ನವ ಮಂಗಳೂರು ಬಂದರು ಮೂಲಕ ಕೈಗೊಳ್ಳಬೇಕು ಎಂದು ಅಧ್ಯಕ್ಷ ಪರೀದ ಉದ್ಯಮಿಗಳಿಗೆ ಮನವಿ ಮಾಡಿದರು.

ಎಸ್‍ಎಲ್‍ಎನ್ ಕಾಫಿ ಕ್ಯೂರಿಂಗ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್ ಮಾತನಾಡಿ, ಉದ್ಯಮಿಗಳು ತಮ್ಮ ಕಂಪನಿಗಳ ಸರಕುಗಳನ್ನು ಸಾಗಾಟ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಂದರು ನಿಯಮಗಳನ್ನು ಸರಳೀಕರಣ ಗೊಳಿಸಬೇಕು ಎಂದು ಈ ಸಂದರ್ಭ ಉದ್ಯಮಿಗಳ ಪರವಾಗಿ ಮನವಿ ಮಾಡಿದರು.

ಉದ್ಯಮಿಗಳಾದ ನಾಗರಾಜಶೆಟ್ಟಿ, ಅಮೀನ್, ಶಿವಕುಮಾರ್, ಅನಿಲ್ ಸೀತಾರಾಮ್, ಮನೋಹರ , ಸುರೇಶ್ ಬಾಬು, ವೆಂಕಟೇಶನ್ ಚರ್ಚೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್.ಪ್ರಕಾಶ್, ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಎಸ್‍ಎಲ್‍ಎನ್ ಸಂಸ್ಥೆ ನಿರ್ದೇಶಕ ವಿಶ್ವನಾಥನ್, ನವ ಮಂಗಳೂರ ಬಂದರಿನ ಹಿರಿಯ ಅಧಿಕಾರಿ ನವನೀತ್ ಕುಮಾರ್, ಸಹಾಯಕ ಅಧಿಕಾರಿ ಮಂಜುನಾಥ್ ಮತ್ತು ಕೊಡಗು ಹಾಗೂ ನೆರೆಯ ಜಿಲ್ಲೆಗಳ ಉದ್ಯಮಿಗಳು ಇದ್ದರು.