ಸೋಮವಾರಪೇಟೆ, ಸೆ. 27: ದೇಶದ ದೀನ ದಲಿತರ ಆಶಾಕಿರಣ, ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ ಖ್ಯಾತಿ, ಸಂವಿಧಾನ ಕರಡು ರಚನಾ ಸಮಿತಿಯ ಮುಂದಾಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಸೋಮವಾರಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಭವನ ಬರೋಬ್ಬರಿ ಏಳು ವರ್ಷಗಳಾದರೂ ಮೇಲೇಳಲಿಲ್ಲ.
ದಲಿತ ಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಆಗಾಗ್ಗೆ ಸಭೆ ಸಮಾರಂಭಗಳಲ್ಲಿ ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆಯೇ ಹೊರತು, ಸಭೆ ಮುಗಿದಾಕ್ಷಣ ಆಗ್ರಹದ ಕೂಗು ಮಂಕಾಗಿ ಹೋಗುತ್ತಿರುವ ಹಿನ್ನೆಲೆ ಅಂಬೇಡ್ಕರ್ ಭವನ ಹಾಳುಕೊಂಪೆಯಾಗಿದೆ. ಕಳೆದ 7 ವರ್ಷಗಳ ಹಿಂದೆ ಭೂಮಿ ಪೂಜೆ ನೆರವೇರಿಸಲ್ಪಟ್ಟ ಭವನವೊಂದು ಇಂದಿಗೂ ಪೂರ್ಣಗೊಳ್ಳದೆ ಅನುದಾನದ ಕೊರತೆಯ ಗ್ರಹಣ ಎದುರಿಸುತ್ತಿರುವದು ಯಾಕೆ? ಎಂಬ ಯಕ್ಷ ಪ್ರಶ್ನೆಗೆ ಉತ್ತರವಿಲ್ಲ.
ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕನಸ್ಸಿನ ಕೂಸಾದ ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿ, ಅನುದಾನದ ಕೊರತೆಯಿಂದ ಸ್ಥಗಿತಗೊಂಡು 7 ವರ್ಷಗಳೇ ಕಳೆದಿರುವದು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದೇ ವ್ಯಾಖ್ಯಾನಿಸಬೇಕಿದೆ.
ದಲಿತಪರ ಸಂಘಟನೆಗಳ ಆಗ್ರಹದ ನಡುವೆ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಸಕ್ತಿ ತೋರಿತ್ತು. ತಾಲೂಕು ಪಂಚಾಯಿತಿಯ ಪಕ್ಕದಲ್ಲಿಯೇ ಜಾಗವನ್ನೂ ಗುರುತಿಸಲಾಗಿತ್ತು. ಅಭಿಯಂತರರು ಸುಮಾರು ರೂ.50 ಲಕ್ಷಕ್ಕೆ ಯೋಜನಾ ಪಟ್ಟಿಯನ್ನೂ ತಯಾರಿಸಿದರು. ಪ್ರಾರಂಭದಲ್ಲಿ ಜನಪ್ರತಿನಿಧಿಗಳು ಅನುದಾನ ಒದಗಿಸುವ ಭರವಸೆ ನೀಡಿದ್ದರು.
ಪ್ರಥಮವಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಮ್ಮ ಅನುದಾನದಲ್ಲಿ ರೂ.5ಲಕ್ಷ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ರೂ. 5ಲಕ್ಷ, ಹಾಗೂ ತಾಲೂಕು ಪಂಚಾಯಿತಿ ರೂ.10 ಲಕ್ಷ ನೀಡಿತ್ತು. ಹೀಗೆ 20 ಲಕ್ಷದಲ್ಲಿ ಪ್ರಾರಂಭಗೊಂಡ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಅನುದಾನ ಹರಿದು ಬರುವದು ಸ್ಥಗಿತಗೊಂಡ ನಂತರ ಕಾಮಗಾರಿಯೂ ನಿಂತ ನೀರಾಯಿತು. ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆ ಕೆಲವೇ ವರ್ಷಗಳಲ್ಲಿ ಪಾಳುಬಿದ್ದು, ಪುಂಡ ಪೋಕರಿಗಳ ಆಶ್ರಯ ತಾಣವಾಯಿತು. ಕೆಲವೊಮ್ಮೆ ಇಲ್ಲಿ ಅಕ್ರಮ ಇಸ್ಪೀಟ್ ಆಟವೂ ನಡೆಯುತ್ತಿತ್ತು. ಪೊಲೀಸರು ಆಗಾಗ್ಗೆ ಧಾಳಿ ನಡೆಸುತ್ತಿದ್ದರಿಂದ ಇಸ್ಪೀಟ್ ಜೂಜು ಕೋರರು ಕಾಲ್ಕಿತ್ತರು.
ಯೋಜನೆಯಲ್ಲಿ ಮೂರು ವಾಣಿಜ್ಯ ಮಳಿಗೆಗಳು, ಸುಸಜ್ಜಿತ ಸಭಾಂಗಣ, ಅತಿಥಿ ಗೃಹ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹೊಂದಿದ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಜಾನ್ ಅವರು ಯಾವದೇ ಅನುದಾನ ಬಿಡುಗಡೆಗೊಳಿಸಿಲ್ಲ. ಇದರೊಂದಿಗೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಒದಗಿಸಲು ಹಿಂದಿನ ಸಾಲಿನ ಅಧ್ಯಕ್ಷ ಶಿವಪ್ಪ ಅವರೂ ಮುಂದಾಗಲಿಲ್ಲ ಎಂಬ ಕೊರಗು ದಲಿತಪರ ಸಂಘಟನೆಗಳ ಕಾರ್ಯಕರ್ತರದ್ದು.
ಸರ್ಕಾರದ ಅನುದಾನ ಸ್ಥಗಿತಗೊಂಡ ಹಿನ್ನೆಲೆ ತಾಲೂಕು ಪಂಚಾಯಿತಿ ವತಿಯಿಂದ ಈ ಹಿಂದೆ ನಿರ್ಣಯವೊಂದನ್ನು ಅಂಗೀಕರಿಸಲಾಗಿತ್ತು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಿಂದಲೂ ತಲಾ ರೂ. 5 ಸಾವಿರ ಹಣ ಸಂಗ್ರಹಿಸುವ ನಿರ್ಣಯವನ್ನು ಪಾಲಿಸಿದ್ದು ಮಾತ್ರ ಕೇವಲ 20 ಗ್ರಾ.ಪಂ.ಗಳು. ಉಳಿದ 20 ಗ್ರಾಮ ಪಂಚಾಯಿತಿಯಿಂದ ಹಣ ಬಂದಿಲ್ಲ. ಇದರೊಂದಿಗೆ ಕಳೆದ ಸಾಲಿನ ಸಂಸದ ಹೆಚ್. ವಿಶ್ವನಾಥ್ ಅವರು ರೂ. 5 ಲಕ್ಷ ಅನುದಾನ ಒದಗಿಸಿದ್ದಾರೆ. ಸದ್ಯಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ 5.50 ಲಕ್ಷ ಹಣವಿದ್ದು, ಈ ಹಣದಲ್ಲಿ ಭವನ ಪೂರ್ಣಗೊಳ್ಳುವದು ಕನಸಿನ ಮಾತು.
ಅತಿ ಹೆಚ್ಚು ದಲಿತರು ನೆಲೆಸಿರುವ ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವದು ಖೇದಕರ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಗಮನಹರಿಸಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಭವನ ನಿರ್ಮಾಣ ಕಾಮಗಾರಿ ಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ದಲಿತಪರ ಸಂಘಟನೆಗಳ ಮುಖಂಡರು ‘ಶಕ್ತಿ’ಯೊಂದಿಗೆ ಆಗ್ರಹಿಸಿದ್ದಾರೆ. ಅರ್ಧಕ್ಕೆ ಸ್ಥಗಿತಗೊಂಡಿರುವ ಅಂಬೇಡ್ಕರ್ ಭವನವನ್ನು ಪೂರ್ಣಗೊಳಿಸಲು ತಾಲೂಕು ಆಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ರೂ. 1 ಕೋಟಿ ಅನುದಾನ ಬಿಡುಗಡೆ ಗೊಳಿಸುವಂತೆ ಮನವಿ ಮಾಡಲಾಗಿತ್ತು.
ತಾಲೂಕು ಕೇಂದ್ರದ ಅಂಗನವಾಡಿಗೆ ಒಂದೂವರೆ ಕೋಟಿ ಅನುದಾನ ನೀಡುವ ಅವಕಾಶವಿದ್ದು, ಒಂದೂವರೆ ಕೋಟಿಗೆ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸು ವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ ಹಿನ್ನೆಲೆ ಇದೀಗ ನೂತನವಾಗಿ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಲಾಗಿದೆ.
ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಪೂರ್ಣಗೊಳಿಸ ಲಾಗುವದು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.