ಮಡಿಕೇರಿ, ಅ. 5: ಮೇಕೇರಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಕೇಂದ್ರ ಕೆಲ ತಿಂಗಳುಗಳಿಂದ ಮುಚ್ಚಲ್ಪಟ್ಟಿದೆ. ಈ ಹಿಂದೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ದಾದಿಯೊಬ್ಬರು ವರ್ಗಾವಣೆಗೊಂಡ ಬಳಿಕ ಈ ಕೇಂದ್ರಕ್ಕೆ ಯಾವದೇ ದಾದಿಯರ ನೇಮಕವಾಗದ ಕಾರಣ ಕೇಂದ್ರ ಮುಚ್ಚಲ್ಪಟ್ಟಿದ್ದು, ಲಕ್ಷಾಂತರ ಮೌಲ್ಯದ ಸುಸಜ್ಜಿತ ಕಟ್ಟಡ ಕಾಡು ಪಾಲಾಗುತ್ತಿರುವದಲ್ಲದೆ, ಮೇಕೇರಿಯ ನಿವಾಸಿಗಳು ಆರೋಗ್ಯ ಚಿಕಿತ್ಸೆಗಾಗಿ ಪರ ಊರನ್ನು ಅವಲಂಭಿಸಬೇಕಾದ ದುಸ್ಥಿತಿ ಬಂದೊದಗಿದೆ.

ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಡಿ ಮೇಕೇರಿಯಲ್ಲಿ ಆರೋಗ್ಯ ಇಲಾಖೆ ತೆರೆದಿದ್ದ ಆರೋಗ್ಯ ಉಪಕೇಂದ್ರ ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿಲ್ಲ. ಮೇಕೇರಿ ಗ್ರಾಮ ಪಂಚಾಯಿತಿ ಎದುರಲ್ಲೇ ಈ ಆರೋಗ್ಯ ಕೇಂದ್ರವಿದ್ದು, ಯಾರೊಬ್ಬರು ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಹಾಕತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಯು. ಹನೀಫ್ ಕೂಡಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಆರೋಗ್ಯ ಕೇಂದ್ರವನ್ನು ಜನರ ಸೇವೆಗೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತÀರಾಗುವಂತೆ ಒತ್ತಾಯಿಸಿದ್ದಾರೆ.