ಕುಶಾಲನಗರ, ಆ. 16: ಭಾನುವಾರ ರಾತ್ರಿ ಹತ್ಯೆಗೊಳಗಾದ ರಿಕ್ಷಾ ಚಾಲಕ ಪ್ರವೀಣ್ ಪೂಜಾರಿಯ ನೊಂದ ಕುಟುಂಬಕ್ಕೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಪರಿಹಾರ ಒದಗಿಸಲಾಗುವದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ತಿಳಿಸಿದ್ದಾರೆ.ಇಂದು ಬೆಳಿಗ್ಗೆ ಗುಡ್ಡೆಹೊಸೂರಿನ ಬೊಳ್ಳೂರು ಗ್ರಾಮದಲ್ಲಿರುವ ಮೃತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು. ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ ಎಂದ ಸಚಿವರು, ಈ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವದು ಎಂದಿದ್ದಾರೆ. ಮೃತ ಪ್ರವೀಣ್ ತಂದೆಗೆ ಸರಕಾರದಿಂದ ಒದಗಿಸಲಾಗುವ ಎಲ್ಲಾ ಪರಿಹಾರ ನೀಡುವ
ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಸಚಿವರು ತಿಳಿಸಿದ್ದಾರೆ. ಕೋಮು ಗಲಭೆಯಲ್ಲಿ ಸಂತ್ರಸ್ಥರಾದ ಕುಟುಂಬಗಳಿಗೆ ಒದಗಿಸುವ ಎಲ್ಲಾ ಸೌಲಭ್ಯಗಳು ಮೃತ ಪ್ರವೀಣ್ ಪೂಜಾರಿಯ ಕುಟುಂಬಕ್ಕೆ ನೀಡಲಾಗುವದು ಎಂದು ಸಚಿವ ಸೀತಾರಾಂ ಭರವಸೆ ನೀಡಿದ್ದಾರೆ. ಈ ಮೂಲಕ ಪ್ರವೀಣ್ ಪೂಜಾರಿ ಹತ್ಯೆಗೆ ಕೋಮು ಸಂಘರ್ಷ ಕಾರಣ ಎನ್ನುವದನ್ನು ಉಸ್ತುವಾರಿ ಸಚಿವರು ಪರೋಕ್ಷವಾಗಿ ಒಪ್ಪಿದಂತಾಗಿದೆ.
ಈ ಸಂದರ್ಭ ಸ್ಥಳದಲ್ಲಿ ಸಚಿವರೊಂದಿಗಿದ್ದ ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಕೂಡಾ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಸ್ಥಳೀಯ ಪ್ರತಿನಿಧಿಗಳು ಈ ಸಂದರ್ಭ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.