ಮಡಿಕೇರಿ, ಅ. 4: ನಗರದ ನಾಲ್ಕು ಶಕ್ತಿ ದೇವತೆಗಳ ಪೈಕಿ ಹಿರಿಯ ಅಕ್ಕ ಎಂದೇ ಖ್ಯಾತಿ ಪಡೆದಿರುವ ಕಳೆದ ಬಾರಿ ದಸರಾ ಉತ್ಸವದಲ್ಲಿ ತೃತಿಯ ಬಹುಮಾನ ಪಡೆದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 43ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ, ನಗರಸಭಾ ಸದಸ್ಯ ಪಿ.ಟಿ. ಉಣ್ಣಿಕೃಷ್ಣ ತಿಳಿಸಿದ್ದಾರೆ.

ಈ ಬಾರಿಯ ಮಂಟಪದಲ್ಲಿ ‘ಮೂಷಿಕಾಸುರನ ಗರ್ವ ಭಂಗ’ ಕಥಾ ಸಾರಾಂಶವನ್ನು ಅಳವಡಿಸ ಲಾಗುತ್ತದೆ. ದಿಂಡಿಗಲ್‍ನಿಂದ ಲೈಟಿಂಗ್ ಬೋರ್ಡ್‍ನ್ನು ತರಿಸಲಾಗುತ್ತಿದ್ದು, ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ದಾವಣಗೆರೆಯ ನವೀನ್ ಎಲೆಕ್ಟ್ರಾನಿಕ್‍ನವರು ಒದಗಿಸಲಿದ್ದಾರೆ. ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದೆ. ಪ್ಲಾಟ್‍ಫಾರಂ ಅನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, 16 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಹುದುಬೂರಿನ ನಾಗರಾಜ್ ತಂಡ ಹಾಗೂ ಮಡಿಕೇರಿಯ ವಿಠಲ ಮತ್ತು ಬಳಗದವರು ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ.

ಮಂಜು ತಂಡ ಕಲಾಕೃತಿಗಳಿಗೆ ಚಲನ-ವಲನ ನೀಡಲಿದ್ದು, ಮಂಜು, ವಿಜಯ, ಲಾರೆನ್ಸ್ ತಂಡ ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಮಾಡಲಿದ್ದಾರೆ. ಬೆಂಗಳೂರಿನ ಸ್ಪೆಷಲ್ ಎಫೆಕ್ಟ್ ಮಂಟಪಕ್ಕೆ ಮೆರುಗು ನೀಡಲಿದ್ದು, ಜನಾಕರ್ಷಣೆ ಪಡೆಯಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಟ್ಟು ರೂ. 17 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತದೆ ಎಂದು ಉಣ್ಣಿಕೃಷ್ಣ ವಿವರಿಸಿದರು.

- ಉಜ್ವಲ್ ರಂಜಿತ್