*ಸಿದ್ದಾಪುರ,ಆ.9: ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಜ್ಯೋತಿ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ಕಳೆದ ಆರು ವರ್ಷಗಳಿಂದ ಯಾವದೇ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ ಜ್ಯೋತಿನಗರ ಪ್ರದೇಶವು ದೇವರಕಾಡು ವ್ಯಾಪ್ತಿಗೆ ಒಳಪಡಿಸಲಿದ್ದು, ಬಸವನ ಬನ ಹಿತರಕ್ಷಣಾ ಸಮಿತಿ ವತಿಯಿಂದ ದೇವರಕಾಡುಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಸಲ್ಲಿಸಿದ ಪುಕಾರಿನ ಮೇರೆಗೆ ತಡೆ ಆಜ್ಞೆ ಜಾರಿಯಲ್ಲಿದ್ದು ನ್ಯಾಯಾಲಯದಲ್ಲಿ ಪ್ರಕರಣ ಉಳಿದಿರುವ ಕಾರಣ ಜ್ಯೋತಿ ನಗರದಲ್ಲಿ ಯಾವದೇ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಮಾತನಾಡಿ ಸಂಬಂಧಿಸಿದ ಮೇಲಧಿಕಾರಿಗಳಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕಲ್ಪಿಸುವಂತೆ ಆದೇಶ ಲಭ್ಯವಾದರೆ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ಸಾಧ್ಯ. ಇಲ್ಲದಿದ್ದರೆ ಇದು ಕಾನೂನು ಉಲ್ಲಂಘನೆ ಆಗುತ್ತದೆ, ಇದೇ ಕಾರಣಕ್ಕಾಗಿ ಕಾನೂನು ಸಲಹೆ ಪಡೆಯುವಂತೆ ಅವರು ಗ್ರಾಮಸ್ಥರಿಗೆ ತಿಳಿಸಿದರು.

ಇತರ ಪ್ರದೇಶಗಳಲ್ಲಿ ದೇವರಕಾಡಿನಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಜನರಿಗೆ ಯಾವದೇ ಸಮಸ್ಯೆ ಇಲ್ಲ, ಆದರೆ ಜ್ಯೋತಿನಗರದ ನಿವಾಸಿಗಳಿಗೆ ಮಾತ್ರ ಸಮಸ್ಯೆ ಸೃಷ್ಠಿಯಾಗಿರುವದು ತಾರತಮ್ಯ ನೀತಿಯಾಗಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಫಿಲೋಮಿನ, ಜನಾರ್ಧನ, ವಿನೋದ್, ಮಂಜುನಾಥ್, ರಂಗ, ಚಂದ್ರಿಕಾ ಹಾಗೂ ಇತರರು ಇದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಚೆಮನೆ ಸುಧಿ, ಭುವನೇಂದ್ರ, ಸತೀಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ.ಕುಮಾರ್ ಬಂದೋಬಸ್ತ್ ಕೈಗೊಂಡಿದ್ದರು.

ಬಸವನ ಬನ ಸಮಿತಿಯಿಂದ ಸ್ಪಷ್ಟನೆ: ಇದೇ ಸಂದರ್ಭ ಪತ್ರಿಕಾ ಹೇಳಿಕೆ ನೀಡಿರುವ ಬಸವನ ಬನ ಸಂರಕ್ಷಣಾ ಸಮಿತಿಯ ಪ್ರಮುಖರಾದ ಬಿ.ಸಿ.ನಂಜಪ್ಪ ತಮ್ಮ ಹೋರಾಟದಿಂದ ಅನೇಕ ಪ್ರದೇಶಗಳಲ್ಲಿ ದೇವರಕಾಡು ಸಂರಕ್ಷಿಸಲ್ಪಟ್ಟಿದ್ದು, ಜಾಗತಿಕ ತಾಪಮಾನ ಮೊದಲಾದ ಪರಿಸರಕ್ಕೆ ಮಾರಕವಾಗಿರುವ ಸಂದರ್ಭದಿಂದ ಜೀವರಾಶಿಗಳ ಸಂರಕ್ಷಣೆ ಜನರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ. ಜನರು ತಾತ್ಕಾಲಿಕವಾಗಿ ಸಣ್ಣಪುಟ್ಟ ಸಮಸ್ಯೆಗೆ ಗುರಿಯಾದರೂ ಪರಿಸರದ ಸಂರಕ್ಷಣೆಯಿಂದ ಮುಂದಿನ ಪೀಳಿಗೆಗೆ ಬದುಕುವ ಹಕ್ಕು ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ದೇವರಕಾಡು ಸಂರಕ್ಷಣೆಯ ತಮ್ಮ ಹೋರಾಟ ಮುಂದುವರೆಯಲಿರುವದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

-ಅಂಚೆಮನೆ ಸುಧಿ