ಮೂರ್ನಾಡು, ಜ. 7: ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ರೀಡಾ ದಿನಾಚರಣೆ ನಡೆಯಿತು.

ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಆಯೋಜಿಸಲಾದ ಕ್ರೀಡಾಕೂಟವನ್ನು ನಿವೃತ್ತ ಶಿಕ್ಷಕಿ ಕಮಲು ಮುದ್ದಯ್ಯ ಧ್ವಜಾರೋಹಣ ಗೈದು, ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಲ್ಲಿ ದಕ್ಷತೆ ಇರಬೇಕೇ ಹೊರತು ಕಿಚ್ಚಿನ ಮನೋಭಾವನೆ ಇರಬಾರದು ಎಂದರು.

ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಗಣ್ಯರು ಪಥಸಂಚಲನ ಗೌರವ ವಂದನೆ ಸ್ವೀಕರಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು.

ಸಂಜೆ ನಡೆದ ಕ್ರೀಡಾ ದಿನಾಚರಣೆ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ಅಧ್ಯಕ್ಷ ಡಾ. ಮುಕ್ಕಾಟೀರ ಸಿ. ಕರುಣ್ ಕಾರ್ಯಪ್ಪ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು ಮಾನಸಿಕ, ದೈಹಿಕವಾಗಿ ಬೆಳವಣಿಗೆ ಪಡೆದುಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದರು.

ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಲಾಲು ಮುದ್ದಯ್ಯ, ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಖಚಾಂಚಿ ಪುದಿಯೊಕ್ಕಡ ಸಿ. ಸುಬ್ರಮಣಿ, ನಿರ್ದೇಶಕ ಈರಮಂಡ ಸೋಮಣ್ಣ, ನಂದೇಟಿರ ರಾಜ ಮಾದಪ್ಪ, ಎ.ಎಂ. ಶೈಲಾ, ವಿದ್ಯಾಸಂಸ್ಥೆ ಕ್ರೀಡಾ ಅಕಾಡೆಮಿ ಅಧ್ಯಕ್ಷ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಪದವಿ ಕಾಲೇಜಿನ ಪ್ರಾಂಶುಪಾಲೆ ಸಿ.ಜೆ. ಪ್ರಿಯ, ಪ್ರೌಢಶಾಲಾ ದೈಹಿಕ ಶಿಕ್ಷಕ ಎ.ಜಿ. ಗಣೇಶ್, ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕ ಮಂಜುನಾಥ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಪದವಿಪೂರ್ವ ಕಾಲೇಜಿನ ನಾಯಕ ರಾಜೇಶ್, ಪ್ರೌಢಶಾಲಾ ನಾಯಕ ಮುತ್ತಣ್ಣ ಉಪಸ್ಥಿತರಿದ್ದರು. ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.