ಮಡಿಕೇರಿ, ಜು. 8: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮುಸುಕಿನ ಜೋಳ ಬಿತ್ತನೆ ಕಾರ್ಯ ಬಿರುಸಿನಿಂದ ನಡೆದಿದ್ದು, ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ ಈಗಾಗಲೇ 3,300 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ ಜುಲೈ ಮೂರನೇ ವಾರದಿಂದ ಭತ್ತ ನಾಟಿ ಮಾಡುವ ಕಾರ್ಯ ಆರಂಭವಾಗಲಿದೆ. ಸದ್ಯ ಭತ್ತ ಸಸಿಮಡಿ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದೆ. ಆಗಸ್ಟ್ ಅಂತ್ಯಕ್ಕೆ ಭತ್ತ ನಾಟಿ ಕಾರ್ಯ ಪೂರ್ಣಗೊಳ್ಳಲಿದೆ. ಈಗಾಗಲೇ ಸಸಿಮಡಿಯಲ್ಲಿ ಬಿತ್ತನೆಯಾಗಿರುವ ಭತ್ತ ಸಸಿಗಳು ನಾಟಿಗೆ ಸಿದ್ಧಗೊಂಡಿದ್ದು, ಬೀಜೋಪಚಾರ ಮಾಡದಿದ್ದಲ್ಲಿ ಬೆಂಕಿರೋಗ ತಡೆಗಟ್ಟಲು ಕಾರ್ಬನ್ ಡೈಜಿನ್ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ.ನಂತೆ ಮಿಶ್ರಣ ಮಾಡಿ ಪೈರು ಕೀಳುವ ಎರಡು ದಿನ ಮೊದಲು ಸಿಂಪಡಿಸಲು ಕೃಷಿ ಇಲಾಖೆ ಸಲಹೆ ಮಾಡಿದೆ.

ಸಸಿ ಮಡಿಯಲ್ಲಿ ಥ್ರಿಪ್ಸ್ ಹಾಗೂ ನೀಲಿಚಿಪ್ಪಿನ ಕೀಟದಭಾದೆ ಕಂಡುಬಂದಲ್ಲಿ ಕ್ವಿನಾಲ್‍ಪಾಸ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 2 ಮಿಲಿಯಂತೆ ಮಿಶ್ರಣ ಮಾಡಿ ಸಿಂಪಡಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರಮೇಶ್ ತಿಳಿಸಿದ್ದಾರೆ. ಹಸಿರೆಲೆ ಗೊಬ್ಬರದ ಬೀಜ ಬಿತ್ತನೆಯಾಗಿದ್ದಲ್ಲಿ ನಾಟಿಗೆ 15 ದಿನ ಮೊದಲೇ ಹಸಿರೆಲೆ ಸಸಿಗಳನ್ನು ಮಣ್ಣಿನೊಂದಿಗೆ ಸೇರಿಸಿ ನೀರು ತಡೆಯುವಂತೆ ಮಾಡಬೇಕಿದೆ. ಇದುವರೆಗೆ ಬಿತ್ತನೆ ಮಾಡಲು ಸಾಧ್ಯವಾಗದಿರುವ ರೈತರು ಮುಂದೆ ನಾಟಿ ಮಾಡಲು ಉದ್ದೇಶಿಸಿದಲ್ಲಿ ಅಲ್ಪಾವಧಿ ತಳಿಗಳಾದ ಹೈಬ್ರಿಡ್ ಭತ್ತ ಅಥವಾ ಐಆರ್64 ಭತ್ತ ಬಿತ್ತನೆ ಮಾಡಬಹುದಾಗಿದೆ ಎಂದು ರಮೇಶ್ ಹೇಳಿದರು. ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, 33,675 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರವನ್ನು ಜಿಲ್ಲೆಯ ವಿವಿಧ ಸಹಕಾರ ಸಂಘಗಳು ಹಾಗೂ ಖಾಸಗಿ ಅಂಗಡಿಗಳಿಗೆ ಸರಬರಾಜು ಮಾಡಿ ವಿತರಣೆಗೆ ಕ್ರಮವಹಿಸಲಾಗಿದೆ. ಡಿಎಪಿ, ಎಂ.ಒ.ಪಿ., ಯೂರಿಯಾ, ಕಾಂಪ್ಲೆಕ್ಸ್ ಮತ್ತಿತರ ರಸಗೊಬ್ಬರಗಳು ಲಭ್ಯವಿವೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.