ಸುಂಟಿಕೊಪ್ಪ, ಆ. 28: ಕೇಂದ್ರ ಸರಕಾರ ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲು ಹೊರಟಿದೆ ಎಂದು ರಾಜ್ಯ ಐಎನ್‍ಟಿಯುಸಿಯ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ ಆರೋಪಿಸಿದರು.

ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಸೆ. 2 ರಂದು ನಡೆಯಲಿದ್ದು, ಈ ಹಿನ್ನೆಲೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಜಂಟಿ ಕಾರ್ಮಿಕ ಕ್ರಿಯಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪ್ರಚಾರ ಜಾಥಾ ಉದ್ಘಾಟನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 2 ರಂದು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳ ಲಾಗಿದೆ. ಕಳೆದ 25 ವರ್ಷಗಳಿಂದ ಅಧಿಕಾರ ನಡೆಸಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದುಡಿಯುವ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರಲು ಬಂಡವಾಳ ಶಾಹಿಗಳು ನೀಡಿದ ಸಾವಿರಾರು ಕೋಟಿ ಹಣದ ಋಣ ತೀರಿಸಲು ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲವಾಗಲು ಕಾರ್ಮಿಕ ಕಾನೂನು ತಿದ್ದುಪಡಿಗೆ ಕೈಹಾಕಿದೆ. ಕಾರ್ಮಿಕ ವರ್ಗದ ಕಾರ್ಮಿಕರ ಇಎಸ್‍ಐ ಮತ್ತು ಇಪಿಎಸ್ (ಭವಿಷ್ಯ ನಿಧಿ)ಗಳು ಸ್ವಲ್ಪ ಮಟ್ಟಿಗೆ ಸಾಮಾಜಿಕ ಭದ್ರತೆಯನ್ನು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದೆ. ಆದರೆ ಮೋದಿ ಸರಕಾರ ಇವುಗಳನ್ನು ಐಚ್ಛಿಕಗೊಳಿಸಲು ಹೊರಟಿದೆ ಎಂದು ಅವರು ದೂರಿದರು.

ಭಾರತದಲ್ಲಿರುವ ಶೇಕಡ 1 ರಷ್ಟಿರುವ ಶ್ರೀಮಂತರಿಗೆ ಒಂದೇ ವರ್ಷದಲ್ಲಿ ರೂ. 5.30 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದೆ. ಆದರೆ, ಕಾರ್ಮಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಕೋಕ್ ನೀಡಿದೆ ಗೃಹೋಪಯೋಗಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ ಈ ಬಗ್ಗೆ ಸೆಪ್ಟೆಂಬರ್ 2 ರಂದು ಐಎನ್‍ಟಿಯುಸಿ, ಸಿಐಟಿಯು, ಬಿಎಸ್‍ಎನ್‍ಎಲ್, ಟಿಯುಸಿ, ಎಚ್‍ಎಂಎಸ್, ಎಐಯುಟಿಸಿ, ಹೆಚ್‍ಎಂಎಸ್, ಬ್ಯಾಂಕ್-ಎಲ್‍ಐಸಿ ವತಿಯಿಂದ ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾ ವ್ಯಾಪಿ ಸಂಚರಿಸಲಿರುವ ಪ್ರಚಾರ ಜಾಥಾಕ್ಕೆ ಬಸ್ ನಿಲ್ದಾಣದಲ್ಲಿ ಐ.ಆರ್. ದುರ್ಗಾಪ್ರಸಾದ್ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಐಎನ್‍ಟಿಯುಸಿ ಕಾರ್ಯದರ್ಶಿ ಹಮೀದ್, ರಮೇಶ್, ಸೋಮಪ್ಪ, ಕುಟ್ಟಪ್ಪ, ಸಾಬು, ಕೊಡಗು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್ ಹಾಗೂ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಪಿ.ಆರ್. ಭರತ್ ಜಾಥಾವನ್ನು ಉದ್ಘಾಟಿಸಿ, ಮಾತನಾಡಿದರು.