ಮಡಿಕೇರಿ, ಅ. 18: ಮುಳಿಯ ಪ್ರಾಪರ್ಟೀಸ್ ಮತ್ತು ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಇಂದು ಇಲ್ಲಿನ ಹಿಮವನ ಬಡಾವಣೆಯಲ್ಲಿ ಸೈಕಲ್ ರ್ಯಾಲಿ, ಪೇಪರ್ ಬೋಟ್ ರಚನೆ ಮತ್ತು ರೇಸ್ ಸ್ಪರ್ಧೆಗಳು ನೆರೆದಿದ್ದವರನ್ನು ರಂಜಿಸಿತು. ಬಡಾವಣೆಯಲ್ಲಿ ಮಾಡಿರುವ ಸುಸಜ್ಜಿತ ರಸ್ತೆಯ ಏರಿಳಿತಗಳಲ್ಲಿ ಇಂದು ಜಿಲ್ಲೆಯ ಹಲವೆಡೆಯಿಂದ ಬಂದಿದ್ದ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಸೈಕಲ್ ಸವಾರಿ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ನಾಲ್ಕು ವರ್ಷದ ಪುಟ್ಟ ಮಕ್ಕಳಿಂದ ಹಿಡಿದು ಹದಿನೆಂಟು ವರ್ಷದ ತರುಣ-ತರುಣಿಯರಿಗೆ ವಿವಿಧ ಮಟ್ಟದ ಸ್ಪರ್ಧೆಗಳು ನಡೆದು ನೋಡುಗರ ಮನ ತಣಿಯಿತು. ಮನದಿಂದ ಮರೆಯಾಗುತ್ತಿರುವ ಪೇಪರ್ ದೋಣಿ ಕಲೆಗೆ ಒತ್ತುಕೊಟ್ಟು ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 50 ಮಂದಿ ಪೋಷಕರು ಪೇಪರ್ ಬೋಟ್ ತಯಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಲವತ್ತು ಮಕ್ಕಳು ಕಲರವದೊಂದಿಗೆ ಹರಿಯುವ ನೀರಿನಲ್ಲಿ ಪೇಪರ್ ದೋಣಿ ಬಿಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಮುಳಿಯ ಪ್ರಾಪಟೀಸ್ ಮಾಲೀಕ, ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತ ಶಯನ, ಉದ್ಯಮಿ ಮಿಟ್ಟು ಚೆಂಗಪ್ಪ, ಪ್ರಶಾಂತ್ ಕುಟ್ಟನ, ಕಾರ್ಯದರ್ಶಿ ಡಾ. ನವೀನ್, ಪ್ರೀತಂ, ಕೃಷ್ಣವೇಣಿ ಪ್ರಸಾದ್ ಬಾವುಟ ಎತ್ತಿ ಸೈಕಲ್ ರೇಸ್ಗೆ ಚಾಲನೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷರುಗಳಾದ ಕೆ.ಕೆ. ವಿಶ್ವನಾಥ್, ಕೆ.ಡಿ. ದಯಾನಂದ್, ಸದಸ್ಯರುಗಳಾದ ಸಂದೀಪ್, ಸತೀಶ್, ಸೋಮಣ್ಣ, ರತ್ನಾಕರ ರೈ, ಪ್ರಮೋದ್ ರೈ, ಧನಂಜಯ್, ಗಾನಾ ಪ್ರಶಾಂತ್, ಇನ್ನರ್ ವೀಲ್ ಅಧ್ಯಕ್ಷೆ ನಮಿತಾ ರೈ, ಶಫಾಲಿ ರೈ ಹಾಗೂ ಇತರರು ಹಾಜರಿದ್ದರು.