ಮಡಿಕೇರಿ, ಜು. 27: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿಂತೆಗೆದು ಕೊಂಡ ಮಾತ್ರಕ್ಕೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆ ಬದಲಾದರೆ ಮಾತ್ರ ಎಲ್ಲ ಸಮಸ್ಯೆಗಳು ಪರಿಹಾರ ಕಂಡುಕೊಳ್ಳತ್ತವೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್‍ಪೂವಯ್ಯ ಅಭಿಪ್ರಾಯಿಸಿದ್ದಾರೆ.

ರಾಷ್ಟ್ರದಲ್ಲಿ ಸೇವೆಯಲ್ಲಿ ಮೊದಲನೇ ಸ್ಥಾನದಲ್ಲಿ ರುವ ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಈಡೇರಿಸಲು ಮೂರು ದಿನಗಳು ಬೇಕಿರಲಿಲ್ಲ. ಸಚಿವರು, ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಒಂದೇ ದಿನದಲ್ಲಿ ಪರಿಹರಿಸ ಬಹುದಿತ್ತು. ಬದಲಿಗೆ ಎಸ್ಮಾ ಜಾರಿ ಮಾಡುವ ಬೆದರಿಕೆ ಹಾಕಿದ್ದಾರೆ. ಎಸ್ಮಾ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ನೌಕರರಿಗೂ ಪ್ರತಿಭಟಿಸುವ ಹಕ್ಕಿದೆ. ಹಕ್ಕನ್ನು ಧಮನಿಸುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ರೈತರ ಸಮಸ್ಯೆ, ಜಿಲ್ಲೆಯ ಕಾಡಾನೆ ಸಮಸ್ಯೆ ಯಾವದರ ಬಗ್ಗೆಯೂ ಮುಖ್ಯಮಂತ್ರಿಗಳು ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿಗಳು ದುರಹಂಕಾರ, ಉದ್ಧಟ ತನ ಬಿಟ್ಟು ಸೌಮ್ಯ ಸ್ವಭಾವದಿಂದ ವರ್ತಿಸಿದರೆ, ಇನ್ನೆರಡು ವರ್ಷ ಉತ್ತಮ ಆಡಳಿತ ನಡೆಸ ಬಹುದು. ಇಲ್ಲವಾದಲ್ಲಿ ರಾಜ್ಯದ ಜನರೇ ಸರಕಾರವನ್ನು ಕಿತ್ತೊಗೆಯಲಿ ದ್ದಾರೆಂದು ಹೇಳಿದ್ದಾರೆ. ಮುಖ್ಯ ಮಂತ್ರಿಗಳು ಸೌಮ್ಯ ರೀತಿಯಿಂದ ಆಡಳಿತ ನಿರ್ವಹಣೆ ಮಾಡಿದ್ದರೆ ಮುಷ್ಕರಗಳಿಂದಾಗಿ ಉಂಟಾದ ಲಕ್ಷಾಂತರ ರೂಪಾಯಿ ನಷ್ಟವನ್ನು ಪಡೆಯಬಹುದಿತ್ತೆಂದು ಅಭಿಪ್ರಾಯಿಸಿದ್ದಾರೆ.