ಸುಂಟಿಕೊಪ್ಪ, ಜೂ.10: ಕೊಡಗಿಗೆ ಮುಂಗಾರು ಪ್ರವೇಶಿಸಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಗದ್ದೆ ಉಳುಮೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಈ ವರ್ಷ ಹಿಂದೆಂದೂ ಕಾಣದಿದ್ದ ಬಿಸಿಲಿನ ಬೇಗೆಯಿಂದ ಕಾಫಿ, ಕರಿಮೆಣಸು ಗಿಡಗಳು ಸೊರಗಿ ಹೋಗಿತ್ತು. ಈಗ ವರುಣ ಆಗಮನದಿಂದ ಗಿಡಗಳು ಚೇತರಿಸಿಕೊಳ್ಳುತ್ತಿವೆ. ಬೆಳೆಗಾರರು ಕಾಫಿ ತೋಟಕ್ಕೆ ಗೊಬ್ಬರ ಹಾಕಲು ತೊಡಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ, ಮಾರ್ಚ್‍ನಲ್ಲಿ ಕಾಫಿ ಗಿಡಕ್ಕೆ ಹೂ ಮಳೆ ಸಿಗದೆ ಇರುವದರಿಂದ ಮುಂದಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮಬೀರಬಹುದೆಂದು ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಫಿ ಕರಿಮೆಣಸು ಇಳುವರಿಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಭತ್ತದ ಗದ್ದೆಗಳನ್ನು ಕೊಡಗಿನ ಅನೇಕ ಕಡೆ ವಾಣಿಜ್ಯ ಕೃಷಿಗಳಾದ ಕಾಫಿ ಅಡಿಕೆ ಮತ್ತಿತರ ತೋಟಗಳಾಗಿ ಪರಿವರ್ತಿಸಲಾಗಿದೆ. ಹಲವರು ಗದ್ದೆ ಪಾಳು ಬಿಟ್ಟಿದ್ದಾರೆ. ಅಲ್ಪಪ್ರಮಾಣದಲ್ಲಿ ಮಾತ್ರ ರೈತರು ಭತ್ತದ ಗದ್ದೆಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಜಾನುವಾರುಗಳ ಸಂಖ್ಯೆಯು ಇಳಿಮುಖವಾಗಿದೆ. ಕಳೆದ ಬಾರಿಗೆ ಮುಂಗಾರು ಮೇ ತಿಂಗಳಿನಲ್ಲಿ ಕಂಡು ಬಂದರೂ ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಮುಂಗಾರು ಕೈಕೊಟ್ಟಿದ್ದು ಕೃಷಿಕರು ಮುಗಿಲಿನತ್ತ ಮುಖಮಾಡಿ ಮಳೆಗಾಗಿ ದೇವರ ಮೊರೆ ಹೋಗುವಂತಾಗಿತ್ತು.

ರೈತರು ಮುಂಗಾರು ಆರಂಭವಾಗುತ್ತಿದ್ದಂತೆ ಉಳುಮೆ ಕಾರ್ಯದಲ್ಲಿ ಮಗ್ನರಾಗಿದ್ದು ಸಸಿಮಡಿಗೆ ಗದ್ದೆ ಹದಗೊಳಿಸುವ ಕಾಯಕದಲ್ಲಿ ತೊಡಗಿರುವದು ಕಂಡು ಬಂದಿದೆ. ಈ ವರ್ಷ ಅಧಿಕ ಮಳೆಯಾಗುವ ಮೂನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯವರು ಧೃಢಪಡಿಸಿದ್ದಾರೆ.