ಚೆಟ್ಟಳ್ಳಿ, ಜ. 3: ಚೇರಳ-ಶ್ರೀಮಂಗಲ ಗ್ರಾಮದ ಚೆಟ್ಟಳ್ಳಿಯ ಕೊಂಗೇಟಿರ ಲೋಕೇಶ್ ಅಚ್ಚಪ್ಪ ಮೀಸೆಗೆ ಮೂರ್ನಾಡಿನಲ್ಲಿ ಯೂಕೋ ಸಂಘಟನೆ ಆಯೋಜಿಸಿದ್ದ ಮಂದ್ ನಮ್ಮೆಯ ‘ಕೊಂಬ ಮೀಸೆರ ಬಂಬ’ನಾಗಿದ್ದಾರೆ.

ಚೆಟ್ಟಳ್ಳಿ ಕೊಂಗೇಟಿರ ಕುಟುಂಬದವರಾದ ಲೋಕೇಶ್ ಅಚ್ಚಪ್ಪ ನಿವೃತ್ತ ಬಿಎಸ್‍ಎಫ್ ಯೋಧ. 1981 ರಿಂದ 2001 ರವರೆಗೆ ಕಾಶ್ಮೀರ, ಪಂಜಾಬ್, ರಾಜಸ್ಥಾನ್, ದೆಹಲಿ ಹಾಗೂ ಬೆಂಗಳೂರಿನಲ್ಲಿ ಸೇನಾ ನೆಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ದಿ. ಕೊಂಗೇಟಿರ ಮುತ್ತಣ್ಣ ಹಾಗೂ ದಿ. ಚೋಂದಮ್ಮ ದಂಪತಿಗಳ ಎರಡನೇ ಮಗನಾಗಿರುವ ಲೋಕೇಶ್ ಅವರಿಗೆ ತನ್ನ ತಾಯಿಯ ದೊಡ್ಡಪ್ಪ ಬಿದ್ದಂಡ ಬೋಪಯ್ಯ ಗಲ್ಲಮೀಸೆಯ ಪ್ರೇರಣೆ ಹಾಗೂ ತನ್ನ ಸೇನೆಯ ಸೇವಾವಧಿಯಲ್ಲಿ ಕಮಾಂಡೆಂಟ್ ಆಗಿದ್ದ ಎಸ್.ಎಸ್. ಬಿಂಡಕ್ಕ್ ಅವರು ಕೊಂಬ ಮೀಸೆಯನ್ನು ಬಿಟ್ಟರೆ ಗಣರಾಜ್ಯೋತ್ಸವದಂದು ಪೇರೆಡ್‍ನ ಎಡ ಅಥವ ಬಲದ ಮುಂದಿನ ನಿಯಂತ್ರಕನಾಗಿ ಅವಕಾಶ ನೀಡುತ್ತೇನೆಂದು ಭರವಸೆ ನೀಡಿದ ಮೇರೆಗೆ ಮೀಸೆಯನ್ನು ಬಿಡತೊಡಗಿದೆನೆಂದು ಹೇಳುತ್ತಾರೆ.

ಚೆಟ್ಟಳ್ಳಿಯ ಜನತೆಗೆ ರಾಮ್‍ರಾಂ ಎಂದು ಗುರುತಿಸಿಕೊಂಡಿರುವ ಲೋಕೇಶ್ ಸಿಪಾಯಿಯಾಗಿ ಸೇನೆಯಲ್ಲಿದ್ದ ಸಮಯದಲ್ಲಿ ಮುಂಜಾನೆ ಬೇಗ ಎದ್ದು ತನ್ನ ಮೀಸೆಯನ್ನು ಸಿದ್ಧಪಡಿಸುವ ಹೊತ್ತಿಗಾಗಲೇ ಸಮಯವಾಗಿ ಬೆಳಗಿನ ಉಪಹಾರ ಸಿಗುತ್ತಿರಲಿಲ್ಲವೆಂದು ಹೇಳುತ್ತಾರೆ. ಆ ಸಮಯದಲ್ಲಿ ಲೋಕೇಶ್ ತನ್ನ ಮೀಸೆಗೆ ತಿಂಗಳಿಗೆ ರೂ. 30 ಹೆಚ್ಚಿನ ಭತ್ಯೆಯನ್ನು ಪಡೆಯುತ್ತಿದ್ದರಂತೆ.

1984ರಲ್ಲಿ ಆರ್ ಪೆರೇಡ್ ಮುಗಿಸಿ ಚಾವಲ್ ಕ್ಯಾಂಪಿನ ಊಟೋಪಚಾರದ ಸಮಯದಲ್ಲಿ ಡೈರೆಕ್ಟರ್ ಜನರಲ್ಲ್ ಓ.ಪಿ. ಮಿಶ್ರ ಕೊಂಬ ಮೀಸೆಬಿಟ್ಟ ಲೋಕೇಶ್ ಅವರನ್ನು ಕಂಡು ಮಧ್ಯಪ್ರದೇಶದವನೆಂದು ಮಾತನಾಡಿಸಲು ಬಂದಾಗ ಕೊಡಗಿನವನೆಂದು ಹೇಳಿದ್ದಕ್ಕೆ ಹತ್ತಿರವೇ ಇದ್ದ ಸೇನೆಯ ಡಿಐಜಿ ಚಂಗಪ್ಪ ಅವರು ಲೋಕೇಶ್ ಅವರ ಬೆನ್ನುತಟ್ಟಿದ್ದರೆಂದು ಸೇನೆಯ ಸಮಯವನ್ನು ನೆನಪಿಸಿದರು.

ಕಳೆದ ವರ್ಷದ ಯೂಕೋ ಸಂಘಟನೆ ಆಯೋಜಿಸಿದ ‘ಮಂದ್ ನಮ್ಮೆ’ಯಲ್ಲೂ ಹಾಗೂ ಈ ವರ್ಷವೂ ‘ಕೊಂಬಮೀಸೆರ ಬಂಬ’ನಾಗಿ ಆಯ್ಕೆಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ತಾ. 3 ರ ಸಂಚಿಕೆಯಲ್ಲಿ ಇವರ ಹೆಸರು ಕೊಂಗಂಡ ಲೋಕೇಶ್ ಎಂದು ತಪ್ಪಾಗಿ ಪ್ರಕಟಗೊಂಡಿದ್ದು, ಇದು ಕೊಂಗೇಟಿರ ಲೋಕೇಶ್ ಎಂದಾಗಬೇಕು.

- ಕರುಣ್ ಕಾಳಯ್ಯ