ಮಡಿಕೆÉೀರಿ, ಆ.24 : ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆ ಕೇವಲ ಬಡತನದ ನಿರ್ಮೂಲನೆಗಾಗಿ ಅಸ್ತಿತ್ವದಲ್ಲಿರುವದಲ್ಲ, ಬದಲಾಗಿ ಇದೊಂದು ಸಮಾನತೆಯ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಲ್ರ್ಡ್ ನಾಲೇಜ್ ಡೇ ಸೆಲಬರೇಷನ್ ಟೀಂ ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಲಬರೇಷನ್ ಟೀಂನ ಜಿಲ್ಲಾ ಸಂಯೋಜಕ ಸಿ.ಜೆ. ಮೋಹನ್ ಮೌರ್ಯ ಸಂಘಟನೆಯ ವತಿಯಿಂದ “ಸಮಾನ ಪ್ರಾತಿನಿಧ್ಯ ದಿನಾಚರಣೆ ಅಥವಾ ಮೀಸಲಾತಿ ದಿನ”ವನ್ನು ಆಚರಿಸುವ ಮೂಲಕ ಮೀಸಲಾತಿಯ ನೈಜಾಂಶವನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುವದೆಂದು ತಿಳಿಸಿದರು.
ಭಾರತ ಬಹುಧರ್ಮೀಯರ, ವಿವಿಧ ಜಾತಿಗಳ ವೈವಿಧ್ಯಮಯ ಸಂಸ್ಕøತಿಗಳ ದೇಶವಾಗಿದ್ದು, ಎಲ್ಲರಲ್ಲಿ ಸಮಾನತೆಯನ್ನು ಮೂಡಿಸುವದಕ್ಕಾಗಿ ಸಂವಿಧಾನದಲ್ಲಿ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಆದರೆ, ಈ ಮೀಸಲಾತಿ ಕೇವಲ ಎಸ್‍ಸಿ ಮತ್ತು ಎಸ್‍ಟಿಗೆ ಮಾತ್ರ ಸೀಮಿತವಾಗಿದೆ ಎನ್ನುವ ತಪ್ಪು ಕಲ್ಪನೆ ಇದೆ. ಇದನ್ನು ದೂರ ಮಾಡುವದಕ್ಕಾಗಿ ಮತ್ತು ಮೀಸಲಾತಿ ಸಮಾನತೆಯ ಸಾಧನ ಎನ್ನುವದನ್ನು ಜನರಿಗೆ ಮನವರಿಕೆ ಮಾಡಿಕೊಡುವದಕ್ಕಾಗಿ ಸಧ್ಯದಲ್ಲಿಯೇ ಸಮಾನ ಪ್ರಾತಿನಿಧ್ಯ ದಿನವನ್ನು ಆಚರಿಸಲಾಗುವದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ದೇಶದ ಸಂವಿಧಾನ ಮತ್ತು ಮೀಸಲಾತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಿದ್ದಾರೆ. ದೇಶದಲ್ಲಿ ಗೊಲ್ಲ, ಉಪ್ಪಾರ, ಪಿಂಜಾರ ಸೇರಿದಂತೆ 95 ಜಾತಿಗಳು ಕೆಟಗರಿ ಒಂದರಲ್ಲಿ ಶೇ.4 ರಷ್ಟು, ಕುರುಬ, ಈಡಿಗ, ಮಡಿವಾಳ, ಕುಂಬಾರ, ವಿಶ್ವಕರ್ಮ, ಕ್ಷೌರಿಕ, ದೇವಾಂಗ, ತಿಗಳ, ಕ್ರೈಸ್ತರು ಇತ್ಯಾದಿ 102 ಜಾತಿಗಳು ಕೆಟಗರಿ ಎರಡು (ಎ) ಯಲ್ಲಿ ಶೇ.15, ಮುಸ್ಲಿಂ ಹಾಗೂ ಇತರ ಸಮನಾಂತರ ಜಾತಿಗಳು ಕೆಟಗರಿ ಎರಡು(ಬಿ)ಯಲ್ಲಿ ಶೇ.4, ಒಕ್ಕಲಿಗ, ರೆಡ್ಡಿ, ಬಂಟ, ಬಲಿಜ, ಕೊಡವ ಇತ್ಯಾದಿ 12 ಜಾತಿಗಳು ಕೆಟಗರಿ ಮೂರು (ಎ) ಯಲ್ಲಿ ಶೇ.4 ರಷ್ಟು, ಲಿಂಗಾಯಿತ ಮತ್ತು ಈ ವ್ಯಾಪ್ತಿಗೆ ಒಳಪಡುವ 42 ಉಪ ಜಾತಿಗಳು ಕೆಟಗರಿ ಮೂರು (ಬಿ) ಯಲ್ಲಿ ಶೇ.5 ರಷ್ಟು, ನಾಯಕ ವಾಲ್ಮೀಕಿ, ಜೇನು ಕುರುಬ, ಕಾಡುಕುರುಬ, ಸೋಲಿಗ ಸೇರಿದಂತೆ 56 ಜಾತಿಗಳು ಎಸ್‍ಟಿ ಮೂಲಕ ಶೇ.3, ಮಾದಿಗ, ಸಮಗಾರ, ಡೊಹರ, ಬೋವಿ, ಲಂಬಾಣಿ ಸೇರಿದಂತೆ 101 ಜಾತಿಗಳು ಎಸ್‍ಸಿ ಮೂಲಕ ಶೇ.15 ರಷ್ಟು ಮೀಸಲಾತಿಯನ್ನು ಪಡೆಯುತ್ತಿವೆ ಎಂದು ಮೋಹನ್ ಮೌರ್ಯ ಮಾಹಿತಿ ನೀಡಿದರು.
ಹೀಗೆ ದೇಶದಲ್ಲಿ ಸಂವಿಧಾನದ ಪ್ರಕಾರ ಎಲ್ಲಾ ಜಾತಿ ಜನಾಂಗಗಳು ಮೀಸಲಾತಿಯ ಲಾಭವನ್ನು ಪಡೆಯುತ್ತಿದ್ದು, ಇದು ಕೇವಲ ಎಸ್‍ಸಿ-ಎಸ್‍ಟಿಗೆ ಮಾತ್ರ ಸೀಮಿತವಾಗಿಲ್ಲ ವೆಂದು ಅವರು ಅಭಿಪ್ರಾಯಪಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ, ಉದ್ಯೋಗ ಮತ್ತು ದೇಶದ ಎಲ್ಲಾ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕೆನ್ನುವ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿಯನ್ನು ಪ್ರಸ್ತಾಪಿಸಿದ್ದಾರೆ ಎಂದು ಮೋಹನ್ ಮೌರ್ಯ ಹೇಳಿದರು.
ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದ್ದು, ವಲ್ರ್ಡ್ ನಾಲೇಜ್ ಡೇ ಸೆಲಬರೇಷನ್ ಟೀಂ ಹಂತ ಹಂತವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮತ್ತೊಬ್ಬ ಸಂಚಾಲಕರಾದ ಸೈಫ್‍ಅಲಿ, ಸದಸ್ಯರಾದ ಜಯರಾಮ್ ಹಾಗೂ ದಿಲೀಪ್ ಕುಮಾರ್ ಉಪಸ್ಥಿತರಿದ್ದರು.