ವೀರಾಜಪೇಟೆ, ಡಿ. 11: ವೀರಾಜಪೇಟೆ ಅನ್ವಾರುಲ್ ಹುದಾ ಸಾರಥ್ಯದಲ್ಲಿ ಸುನ್ನಿ ಸಂಘ ಕುಟುಂಬಗಳ ವತಿಯಿಂದ ಪ್ರವಾದಿ ಅವರ 1491 ನೇ ಜನ್ಮ ಮಾಸಾಚರಣೆಯ ಪ್ರಯುಕ್ತ ವೀರಾಜಪೇಟೆಯ ಪಟ್ಟಣದಲ್ಲಿ ಮೀಲಾದ್ ಘೋಷಣಾ ಜಾಥಾ ನಡೆಯಿತು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಆರಂಭಗೊಂಡ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನ್ವಾರುಲ್ ಹುದಾ ಸಂಸ್ಥೆಯಲ್ಲಿ ಸಮಾರೋಪಗೊಂಡಿತು.

ರ್ಯಾಲಿಯಲ್ಲಿ ದಫ್ ಹಾಗೂ ಸ್ಕೌಟ್ ಪ್ರದರ್ಶನವು ನಡೆಯಿತು. ಅನ್ವಾರುಲ್ ಹುದಾದಲ್ಲಿ ನಡೆದ ಸಮಾರೋಪ ಸಮಾವೇಶದಲ್ಲಿ ಅಬ್ದುಲ್ ಸಲಾಂ ಸಖಾಫಿ ಕಣ್ಣೂರ್ ಮುಖ್ಯ ಭಾಷಣ ಮಾಡಿ ಪ್ರಚಲಿತ ಸಮಸ್ಯೆಗಳಿಗೆ ಪ್ರವಾದಿ(ಸ.ಅ) ಅವರ ಜೀವನ ಪರಿಹಾರ ಮಾರ್ಗವಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬುದ್ದ, ಪಾರ್ಸಿ ಎಲ್ಲಾ ಧರ್ಮದ ಜನರ ಶರೀರದಲ್ಲಿ ಹರಿಯುವ ರಕ್ತ ಕೆಂಪಾಗಿದ್ದು, ಇಲ್ಲಿ ಕೋಮುಗಲಭೆ, ಅಶಾಂತಿ, ಅಧರ್ಮಕ್ಕೆ ಯಾರಿಗೂ ಅವಕಾಶವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಯಾಕುಬ್ ಮಾಸ್ಟರ್ ಬರೆದ ಆದರ್ಶ ಕಾರ್ಯಕರ್ತ ಕೃತಿಯನ್ನು ಕೋಯಮ್ಮ ತಂಙಳ್ ಕೊಂಡಂಗೇರಿ ಉದ್ಘಾಟಿಸಿದರು.

ಎಸ್.ಎಸ್.ಎಫ್ ಮಾಜಿ ರಾಜ್ಯ ಉಪಾಧ್ಯಕ್ಷ ಉಮ್ಮರ್ ಸಖಾಫಿ ಬಲಮುರಿ ರವರಿಗೆ ನೀಡಿ ಪ್ರಕಾಶನ ಮಾಡಿದರು. ಅನ್ವಾರುಲ್ ಹುದಾ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಅಹ್ಸನಿ ಉಸ್ತಾದ್, ಎಸ್.ಎಸ್.ಎಫ್ ಜಿಲ್ಲಾ ಅಧ್ಯಕ್ಷ ರಫೀಕ್ ಸಖಾಫಿ ಚೆರಿಯಪರಂಬು, ಜಿಲ್ಲಾ ಕಾರ್ಯದರ್ಶಿ ರಫೀಕ್, ಎಸ್.ವೈ.ಎಸ್ ರಾಜ್ಯ ನಾಯಕ ಅಬೂಬಕ್ಕರ್ ಕಡಂಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಾಕುಬ್ ಮಾಸ್ಟರ್ ಕೊಳಕೇರಿ ಸ್ವಾಗತಿಸಿ, ಅಬ್ದುರಹಮಾನ್ ಅಹ್ಸನಿ ಉಸ್ತಾದ್ ವಂದಿಸಿದರು.