ವೀರಾಜಪೇಟೆ, ಆ. 30: ಕೇರಳದ ಕರಾವಳಿಯಲ್ಲಿ ಮೀನು ಹಿಡಿಯುವ ನಿರ್ಬಂಧ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕೊಡಗಿಗೆ ಈಗ ಸಮುದ್ರದ ಮೀನು ಹೇರಳವಾಗಿ ಬರುತ್ತಿದ್ದು, ನ್ಯಾಯ ಸಮ್ಮತವಾದ ಬೆಲೆಯಲ್ಲಿ ಮೀನು ದೊರೆಯುತ್ತಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.ಮೀನುಗಳ ಸಂತಾನೋತ್ಪತ್ತಿ ಕಾಲದ ನಿಮಿತ್ತ ಕೇರಳದ ಕಡಲ ತೀರದಲ್ಲಿ ಕಳೆದ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮೀನು ಹಿಡಿಯುವದನ್ನು ಕೇರಳದ ಮೀನು ಇಲಾಖೆ ನಿಷೇಧಿಸಿತ್ತು. ದಕ್ಷಿಣ ಕೊಡಗಿನ ಮೀನು ವ್ಯಾಪಾರಿಗಳು ಎರಡು ತಿಂಗಳವರೆಗೆ ಕೆ.ಆರ್. ನಗರ, ಗೆಜ್ಜಲಗೆರೆ, ಕೆ.ಆರ್.ಸಾಗರ. ಪಿರಿಯಾಪಟ್ಟಣದಿಂದ ಬರುವ ಹೊಳೆ ಮೀನನ್ನು ವ್ಯಾಪಾರಕ್ಕಾಗಿ ಅವಲಂಭಿಸಿದ್ದರು. ಆದರೆ ಹೊಳೆ ಮೀನಿನ ಮಾರಾಟದ ಬೆಲೆಯು ಅಧಿಕವಾಗಿತ್ತು. ಬೇಡಿಕೆಗೆ ತಕ್ಕಂತೆ ಹೊಳೆ ಮೀನು ಸರಬರಾಜಾಗುತ್ತಿದ್ದರಿಂದ ಬೆಲೆ ಅಧಿಕವಾಗಿದ್ದರೂ ಗ್ರಾಹಕರು ಹೊಳೆ ಮೀನನ್ನು ಮುಗಿ ಬಿದ್ದು ಖರೀದಿಸುತ್ತಿದ್ದರು.
ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಕಳೆದ ಮೇ ಹಾಗೂ ಜೂನ್ ತಿಂಗಳಲ್ಲಿ ಸಮುದ್ರದ ಕರಾವಳಿಗಳಲ್ಲಿ ಮೀನು ಹಿಡಿಯುವದನ್ನು ನಿಷೇಧಿಸಲಾಗಿತ್ತು.