ವೀರಾಜಪೇಟೆ, ಜು. 7: ತಾಲೂಕಿನ ಪ್ರಮುಖ ಕೇಂದ್ರವಾಗಿರುವ ವೀರಾಜಪೇಟೆಯ ಹಳೇ ತಾಲೂಕು ಕಚೇರಿಯ ಸ್ಥಳದಲ್ಲಿಯೇ ಕೈಗೊಂಡಿರುವ ಮಿನಿ ವಿಧಾನಸೌಧದ ನೆಲ ಅಂತಸ್ತಿನ ಕಾಮಗಾರಿ ಮುಂದಿನ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಜಾಧವ್ ಹೇಳಿದರು.

ವೀರಾಜಪೇಟೆ ಮಿನಿ ವಿಧಾನಸೌಧದ ಸ್ಥಳಕ್ಕೆ ಸಹಾಯಕ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಸಹಾಯಕ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ವಿಚಾರ ವಿನಿಮಯ ಮಾಡಿದ ನಂತರ ಕಟ್ಟಡದ ಕಾಮಗಾರಿ ಹಾಗೂ ನಕಾಶೆಯನ್ನು ಪರಿಶೀಲಿಸಿದರು.

ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲಾಗಿದೆ. ಗುತ್ತಿಗೆದಾರರು ಈಗ ಬಿರುಸಿನ ಕಾಮಗಾರಿ ಕೈಗೊಂಡಿದ್ದಾರೆ. ಮುಂದೆ ಕಾಮಗಾರಿ ವಿಳಂಬವಾಗಲು ಸಾಧ್ಯತೆ ಇಲ್ಲ. ಗುತ್ತಿಗೆದಾರರ ಬದಲಾವಣೆಯಿಂದ ಮಿನಿ ವಿಧಾನಸೌಧದ ಕಾಮಗಾರಿ ವಿಳಂಬವಾಗಲು ಸಾಧ್ಯವಾಯಿತು. ಇನ್ನು ಕಾಮಗಾರಿ ಚುರುಕುಗೊಳ್ಳಲಿದೆ ಎಂದು ಜಾದವ್ ಹೇಳಿದರು.

ಮಿನಿ ವಿಧಾನಸೌಧದ ಕಾಮಗಾರಿ ಆಮೆ ನಡಿಗೆಯಲ್ಲಿ ಮುಂದುವರೆಯುತ್ತಿದೆ ಎಂದು ಗಾಂಧಿನಗರದ ಪಿ.ಎ. ಮಂಜುನಾಥ್ ಜಿಲ್ಲಾ ಅಭಿಯಂತರರಿಗೆ ದೂರಿದರು. ಮಿನಿ ವಿಧಾನಸೌಧದ ಕಾಮಗಾರಿ ವಿಳಂಬದ ಕುರಿತು ಎಂಟು ದಿನಗಳ ಹಿಂದೆ ವೀರಾಜಪೇಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ದೂರಿನ ಮನವಿ ನೀಡಲಾಗಿತ್ತು. ಈ ಸಂದರ್ಭ ಇಲಾಖೆಯ ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಹೆಗ್ಗಡೆ, ಸತೀಶ್, ನವೀನ್, ಗುತ್ತಿಗೆದಾರ ಈಶ್ವರಮೂರ್ತಿ ಮತ್ತಿತರರು ಹಾಜರಿದ್ದರು.