ಆಲೂರು-ಸಿದ್ದಾಪುರ, ಜೂ. 24: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈ ಭಾಗದ ಜನತೆ, ರೈತರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ.
ಹಾಸನ ಜಿಲ್ಲೆಯ ಆಲೂರು ಮತ್ತು ಯಸಳೂರು ಮೀಸಲು ಅರಣ್ಯದ ಮೂಲಕ ಕೊಡ್ಲಿಪೇಟೆ ವ್ಯಾಪ್ತಿಯ ಕಟ್ಟೆಪುರ ಮೀಸಲು ಅರಣ್ಯಕ್ಕೆ ಬರುವ ಕಾಡಾನೆಗಳ ಹಿಂಡು ಜಿಲ್ಲೆಯ ಕಟ್ಟೆಪುರ, ಹಂಪಾಪುರ, ಜನಾರ್ಧನಹಳ್ಳಿ, ಯಸಳೂರು, ಬಿಳಹ, ಬೆಂಬಳೂರು, ಮಾದ್ರೆ ಮುಂತಾದ ಗ್ರಾಮಗಳಲ್ಲಿ ಸಂಚರಿಸುತ್ತವೆ. ಕಳೆದ ಐದಾರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ-ಹಗಲೆನ್ನದೆ ಕಾಡಾನೆಗಳು ಗ್ರಾಮದೊಳಗೆ ನುಸುಳುತ್ತಿರುತ್ತವೆ. ರಾತ್ರಿ ವೇಳೆ ಕಾಡಾನೆಗಳ ಹಿಂಡು ರೈತರ ಕಾಫಿ ತೋಟ, ಬಾಳೆ ತೋಟ ಹೊಲ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವದು ಈ ಭಾಗದ ಜನರಿಗೆ ಸಾಮಾನ್ಯವಾಗಿದೆ. ಜನರು, ರೈತರು ಹಾಗೂ ವಿದ್ಯಾರ್ಥಿಗಳು ಕಾಡಾನೆಗಳ ಹಾವಳಿಯಿಂದ ತಿರುಗಾಡಲು ಭಯ ಪಡುತ್ತಿರುತ್ತಾರೆ.
ಕಳೆದ 2 ವರ್ಷಗಳಿಂದ ಶನಿವಾರಸಂತೆ ವ್ಯಾಪ್ತಿಯ ನಿಡ್ತ, ಗೋಪಾಲಪುರ, ಹಿತ್ಲುಕೇರಿ, ರಾಮನಹಳ್ಳಿ, ಎಳನೀರುಗುಂಡಿ, ಕಾರ್ಗೋಡು, ಮುಳ್ಳೂರು, ಕಣಿವೆಬಸವನಹಳ್ಳಿ, ಮಾಲಂಬಿ, ಆಲೂರು-ಸಿದ್ದಾಪುರ, ಕಂತೆಬಸವನಹಳ್ಳಿ, ಹಿತ್ಲುಗದ್ದೆ ಮುಂತಾದ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಗೋಪಾಲಪುರ, ಹಿತ್ಲುಕೇರಿ ಮತ್ತು ಎಳನೀರುಗುಂಡಿ ಗ್ರಾಮಗಳಲ್ಲಿ ಅರಣ್ಯ ಇಲ್ಲದಿದ್ದರೂ ಪಕ್ಕದ ಅರಣ್ಯಗಳಿಂದ ಬರುವ ಕಾಡಾನೆಗಳು ಈ ಗ್ರಾಮಗಳಲ್ಲಿರುವ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುತ್ತವೆ. ಈ ವ್ಯಾಪ್ತಿಯಲ್ಲಿ ಪ್ರತಿದಿನ ರೈತರ ಕಾಫಿ ತೋಟ ಮತ್ತು ಬಾಳೆ ತೋಟಗಳಿಗೆ ನುಗ್ಗಿ ಕೃಷಿ ಫಸಲನ್ನು ತುಳಿದು ಧ್ವಂಸಗೊಳಿಸುತ್ತವೆ. ಈ ವ್ಯಾಪ್ತಿಯ ಜನರು, ರೈತರು ಹಾಗೂ ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಕಾಡಾನೆಗಳು ರಸ್ತೆಯಿಂದ ಕಾಫಿ ತೋಟಗಳಿಗೆ ರಾಜಾರೋಷವಾಗಿ ತಿರುಗಾಡುವದರಿಂದ ಜನರಿಗೆ ಆತಂಕ ಸೃಷ್ಟಿಯಾಗಿದೆ.
ಕಳೆದ 5 ವರ್ಷಗಳಿಂದ ಕೊಡ್ಲಿಪೇಟೆ ಮತ್ತು ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವದರ ಬಗ್ಗೆ ಮತ್ತು ಹಾವಳಿಯನ್ನು ನಿಯಂತ್ರಿಸದಿರುವ ಬಗ್ಗೆ ಈ ಭಾಗದ ರೈತರು ಮತ್ತು ಜನರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಅರಣ್ಯ ಇಲಾಖೆಯಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಈ ಭಾಗದ ಜನರು ಆರೋಪಿಸುತ್ತಾರೆ. ಆದರೆ ಅರಣ್ಯ ಇಲಾಖೆಯಿಂದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 2 ಪುಂಡಾನೆಗಳನ್ನು ಹಿಡಿಯಲಾಗಿದ್ದರೂ ಕಾಡಾನೆಗಳ ಹಾವಳಿ ಮಾತ್ರ ನಿಯಂತ್ರಣವಾಗಿಲ್ಲ. ಅಲ್ಲದೆ ಅರಣ್ಯ ಇಲಾಖೆ ಕಾಡಾನೆ ಹಾವಳಿ ಹೆಚ್ಚಾಗಿರುವ ಕಡೆಗಳಲ್ಲಿ ಕಂದಕವನ್ನು ನಿರ್ಮಿಸಿಕೊಟ್ಟಿದೆ. ಆದರೆ ಕೆಲವು ಕಡೆಗಳಲ್ಲಿ ಕಂದಕ ನಿರ್ಮಾಣ ಮಾಡುವಾಗ ದೊಡ್ಡ ಬಂಡೆಕಲ್ಲುಗಳು ಸಿಗುವದರಿಂದ ಕಾಮಗಾರಿ ಕಾರ್ಯಕ್ಕೆ ಅಡ್ಡಿಯಾಗುತ್ತದೆ.
ಇದರಿಂದ ಕೆಲವು ಕಾಡಾನೆಗಳು ಕಂದಕದಲ್ಲಿರುವ ಬಂಡೆಕಲ್ಲುಗಳನ್ನು ದಾಟಿಕೊಂಡು ಗ್ರಾಮದೊಳಗೆ ಸಲೀಸಾಗಿ ನುಗ್ಗುತ್ತವೆ. ಇತ್ತೀಚೆಗೆ ಅರಣ್ಯ ಇಲಾಖೆ ಕಾಡಾನೆ ಹಾವಳಿ ಹೆಚ್ಚಾಗಿರುವ ಗೋಪಾಲಪುರ, ಎಳನೀರುಗುಂಡಿ, ಹಿತ್ಲುಕೇರಿ ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸುತ್ತಿರುವ ಬಗ್ಗೆ ರಸ್ತೆ ಬದಿಯಲ್ಲಿ ಕಾಡಾನೆ ಸಂಚರಿಸುವ ಎಚ್ಚರಿಕೆ ಸೂಚಿಸುವ ಫಲಕ ಮತ್ತು ಬ್ಯಾನರ್ಗಳನ್ನು ಅಳವಡಿಸಿ ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿತು. ಆದರೆ ರಾತ್ರಿ ವೇಳೆ ಕಾಡಾನೆಗಳು ಅಳವಡಿಸಿದ ಫಲಕ ಮತ್ತು ಬ್ಯಾನರ್ಗಳನ್ನು ಕಿತ್ತು ಹಾಕಿದೆ. ಒಟ್ಟಿನಲ್ಲಿ ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು, ಜನರು, ಕಾರ್ಮಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಆತಂಕ ಪಡುತ್ತಿರುವದು ಕಂಡು ಬಂದಿದೆ.
- ದಿನೇಶ್ ಮಾಲಂಬಿ.