ಸೋಮವಾರಪೇಟೆ, ಅ. 17: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಅಂಗಡಿ, ದೇವಾಲಯ, ಮನೆ ಸೇರಿದಂತೆ ದ್ವಿಚಕ್ರ ವಾಹನಗಳು ಆಗಿಂದಾಗ್ಗೆ ಕಳ್ಳತನವಾಗುತ್ತಿದೆ.ಕಳೆದ ಒಂದೆರಡು ತಿಂಗಳಿನಿಂದ ಕಳ್ಳರ ಕೈಚಳಕಕ್ಕೆ ಮಿತಿ ಇಲ್ಲದಂತಾಗಿದ್ದು, ಇವರನ್ನು ನಿಗ್ರಹಿಸಬೇಕಾದ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿರುವಂತೆ ಕಂಡುಬಂದಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ನಗರಕ್ಕೆ ಸಮೀಪದ ಬಜೆಗುಂಡಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಹುಂಡಿ ಒಡೆದು ಕಳ್ಳತನಕ್ಕೆ ಯತ್ನ ನಡೆಸಿದ್ದ ಓರ್ವ ಖದೀಮನನ್ನು ಸ್ಥಳಿಯರೇ ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ ನಡೆದಿತ್ತು. ಈ ಸಂದರ್ಭವೇ ಕಾರಿನಲ್ಲಿ ಇತರ ನಾಲ್ವರು ಕಳ್ಳರು ಪರಾರಿಯಾಗಿದ್ದರು.

ಇದಾದ ನಂತರ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿದ್ದು, ದೇವಾಲಯಗಳು ಹಾಗೂ ದ್ವಿಚಕ್ರ ವಾಹನಗಳೇ ಕಳ್ಳರ ಟಾರ್ಗೆಟ್ ಆಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳು ಆಗಿಂದಾಗ್ಗೆ ಕಳುವಾಗುತ್ತಿದ್ದು, ಸೋಮವಾರಪೇಟೆ ಪೊಲೀಸರ ನಿದ್ದೆಗೆಡಿಸಿದೆ. ಕಳ್ಳರನ್ನು ಬೇಟೆಯಾಡಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ಕಳ್ಳರು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಎರಡುದಿನಗಳ ಹಿಂದಷ್ಟೇ ಕರ್ಕಳ್ಳಿ ಗ್ರಾಮದ ಬಸವೇಶ್ವರ ದೇವಾಲಯದ ಹುಂಡಿ ಒಡೆದು ಕಾಣಿಕೆ ಹಣವನ್ನು ಎಗರಿಸಿದ್ದ ಕಳ್ಳರ ತಂಡ, ಇಲ್ಲಿನ ಕುಳ್ಳಾರಿಗುಡಿ ದೇವಾಲಯದ ಬಳಿನಿಂತಿದ್ದ ದ್ವಿಚಕ್ರ ವಾಹನವನ್ನು ಅಪಹರಿಸಿತ್ತು. ಇದಕ್ಕೂ ಮೊದಲು ಇಲ್ಲಿನ ಜೂನಿಯರ್ ಕಾಲೇಜು ಬಳಿಯ ಕ್ಯಾಂಟೀನ್‍ನ ಬೀಗ ಮುರಿದು ಒಂದು ಸಾವಿರ ಹಣ ಸೇರಿದಂತೆ ಬೈಕನ್ನು ಕೊಂಡೊಯ್ಯಲಾಗಿತ್ತು.

ಈ ಬೈಕ್‍ನಲ್ಲಿಯೇ ಐಗೂರಿಗೆ ತೆರಳಿ ಅಲ್ಲಿನ ಶ್ರೀಗುಳಿಗಪ್ಪ ದೇವಾಲಯದ ಹುಂಡಿ ಒಡೆಯುವ ಸಂದರ್ಭ ಸ್ಥಳೀಯರು ಆಗಮಿಸಿದಾಗ ಬೈಕ್ ಸಹಿತ ಪರಾರಿಯಾಗಿದ್ದರು. ಈ ಪೈಕಿ ಓರ್ವನನ್ನು ಅಂದು ನಡುರಾತ್ರಿ 2.30ರ ಸುಮಾರಿಗೆ ಕುಂಬೂರು ಗ್ರಾಮದ ಸೋಮಪ್ಪ ಎಂಬವರು ಅಡ್ಡಗಟ್ಟಿ ಹಿಡಿದಿದ್ದು, ಮೂತ್ರ ವಿಸರ್ಜನೆಯ ನೆಪದಲ್ಲಿ ಕಳ್ಳ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.

ಈ ಘಟನೆಗಳು ಮಾಸುವ ಮುನ್ನವೇ ನಿನ್ನೆ ದಿನ ಇಲ್ಲಿನ ಗಾಂಧಿನಗರದ ತಮ್ಮ ವಾಸದ ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಆಪ್ತ ಸಹಾಯಕ ಆರ್.ಡಿ.ರವಿ ಅವರ ದ್ವಿಚಕ್ರ ವಾಹನ ಕಳವಾಗಿದೆ. ಈ ಬಗ್ಗೆ ರವಿ ಅವರು ಸೋಮವಾರಪೇಟೆ ಸುತ್ತಮುತ್ತಲಲ್ಲಿ ಹುಡುಕಾಟ ನಡೆಸಿದ್ದು ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಇಂದು ಬೆಳಗ್ಗಿನ ಜಾವ ಬಜೆಗುಂಡಿ ಗ್ರಾಮದ ಮಸೀದಿಯ ಬಳಿ ಬೈಕ್ ಪತ್ತೆಯಾಗಿದೆ. ಬೈಕ್‍ನಲ್ಲಿ ಹೆಚ್ಚು ಪೆಟ್ರೋಲ್ ಇಲ್ಲದೇ ಇರುವದು, ಪೆಟ್ರೋಲ್ ಟ್ಯಾಂಕ್‍ನ ಲಾಕ್ ತೆರೆಯಲು ಸಾಧ್ಯವಾಗದೇ ಇದ್ದುದರಿಂದ ಕಳ್ಳರು ರಸ್ತೆ ಬದಿಯಲ್ಲಿಯೇ ಬೈಕ್ ನಿಲ್ಲಿಸಿ ಪರಾರಿಯಾಗಿದ್ದಾರೆ.

ಒಟ್ಟಾರೆ ಕಳುವು ಮಾಡಿದ ಬೈಕ್‍ಗಳ ಮೂಲಕವೇ ಮತ್ತೊಂದು ಸ್ಥಳಕ್ಕೆ ತೆರಳಿ ಅಲ್ಲೂ ಕಳವಿಗೆ ಯತ್ನಿಸುತ್ತಿರುವದು ಕಂಡುಬಂದಿದೆ. ಕಳೆದ ಕೆಲ ಸಮಯದಿಂದ ಸೋಮವಾರಪೇಟೆ ಅಕ್ಷರಶಃ ಕಳ್ಳರ ಸ್ವರ್ಗದಂತಾಗಿದೆ. ಕಳ್ಳರು ರಾತ್ರಿ ಸಮಯ ಸಾಧಿಸಿ ಚೋರ ಕೃತ್ಯಕ್ಕೆ ಇಳಿಯುತ್ತಿದ್ದು, ಪೊಲೀಸರು ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದಾರಾ? ಎಂಬ ಸಂಶಯ ಹುಟ್ಟು ಹಾಕಿದೆ.

ಪೊಲೀಸ್ ಇಲಾಖೆಗೆ ಕಳ್ಳತನ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದ್ದು, ಕಳ್ಳರ ಬೇಟೆಗೆ ಕಸರತ್ತು ನಡೆಸಿದರೂ ಫಲಕಾಣುತ್ತಿಲ್ಲ. ಇಲ್ಲಿನ ಠಾಣಾಧಿಕಾರಿಗಳು ನೂತನವಾಗಿ ಆಗಮಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನಷ್ಟು ಶ್ರಮವಹಿಸಬೇಕಾದ ಅನಿವಾರ್ಯತೆ ಎದ್ದುಕಾಣುತ್ತಿದೆ.

- ವಿಜಯ್ ಹಾನಗಲ್