*ಗೋಣಿಕೊಪ್ಪಲು, ನ. 20: ಭಾರೀ ಗಾತ್ರದ ಮಾವಿನ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ವೇಳೆ ಪೊನ್ನಂಪೇಟೆ ಅರಣ್ಯಾಧಿಕಾರಿಗಳು ಧಾಳಿ ನಡೆಸಿ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ಸಂಜೆ ಹರಿಹರ ನಾಲ್ಕೇರಿಯಲ್ಲಿ ಜರುಗಿದೆ. ಲಾರಿ ಚಾಲಕ ಪರಾರಿಯಾಗಿದ್ದು ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಳಂಜಿ ಮರದ ಕೆಳಗೆ ಸುಮಾರು 80 ಸಾವಿರ ಮೌಲ್ಯದ ಭಾರೀ ಗಾತ್ರದ ಮಾವಿನ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆಯಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯಾಧಿಕಾರಿಗಳು ಸಂಜೆ 6 ಗಂಟೆ ವೇಳೆಗೆ ಹರಿಹರ ನಾಲ್ಕೇರಿ ರಸ್ತೆಯ ಜಂಕ್ಷನ್‍ನಲ್ಲಿ ವಾಹನವನ್ನು ತಡೆಗಟ್ಟಿ ಪರಿಶೀಲಿಸಿದಾಗ ಮರದ ದಿಮ್ಮಿ ಕಂಡು ಬಂದಿದೆ. ಈ ಸಂದರ್ಭ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.
ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಉತ್ತಪ್ಪ, ವನಪಾಲಕರಾದ ಬುರಾನುದ್ದೀನ್,ಹಂಸ, ರಾಘವ ನಾಯಕ, ಅರಣ್ಯ ರಕ್ಷಕರಾದ ಜನಾರ್ಧನ್, ರಾಜೇಶ್, ಸಂಜಯ್, ಗಾಂಧಿ ಹಾಗೂ ಭರತ್ ಕಾರ್ಯಾಚರಣೆ ತಂಡದಲ್ಲಿದ್ದರು.