ಸಿದ್ದಾಪುರ, ಡಿ. 23: ಮಾಲ್ದಾರೆ ಚೆನ್ನಂಗಿ ವ್ಯಾಪ್ತಿಯಲ್ಲಿ ಯಾವದೇ ನಕ್ಸಲರು ಇಲ್ಲವೆಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬಿಜಯ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಮಾಲ್ದಾರೆಯ ದಿಡ್ಡಳ್ಳಿಯ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಹಾಗೂ ರಾಜ್ಯದ ವಿವಿಧೆಡೆಯಿಂದ ಸಚಿವರು, ಶಾಸಕರು ಆಗಮಿಸುವ ಹಿನ್ನೆಲೆಯಲ್ಲಿ ಕೈಗೊಂಡ ಭದ್ರತೆಯನ್ನು ಪರಿಶೀಲಿಸಲು ಆಗಮಿಸಿದ್ದ ಅವರು, ‘ಶಕ್ತಿ’ಯೊಂದಿಗೆ ಮಾತನಾಡಿ, ಮಾಲ್ದಾರೆ-ಚೆನ್ನಂಗಿ ವ್ಯಾಪ್ತಿಯಲ್ಲಿ ಯಾವದೇ ನಕ್ಸಲರು ಇಲ್ಲ ಎಂದು ತಿಳಿಸಿದರು. ಹೊರ ಊರಿನÀವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಯವರು 144 ಸೆಕ್ಷನ್ ಜಾರಿಗೊಳಿಸಿ ದ್ದಾರೆ. ಹಾಗೂ ಪ್ರಚೋದನಾಕಾರಿ ಭಾಷಣವನ್ನು ಮಾಡಬಾರದೆಂದು ಮುಂಜಾಗೃತಾ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಸೆಕ್ಷನ್ ಜಾರಿಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ 16 ದಿನಗಳಿಂದ ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಗುಡಿಸಲು ಕಳೆದುಕೊಂಡ ನಿರಾಶ್ರಿತರು ಶಾಶ್ವತ ಸೂರಿಗಾಗಿ ಒತ್ತಾಯಿಸಿ ದಿಡ್ಡಳ್ಳಿಯಿಂದ ಮಡಿಕೇರಿಗೆ ವಾಹನದ ಮೂಲಕ ತೆರಳಲು ಮುಂದಾದ ಸಂದರ್ಭ ಪೊಲೀಸರು ದಿಡ್ಡಳ್ಳಿಗೆ ಪ್ರವೇಶ ನಿರಾಕರಿಸಿದರು. ಈ ಸಂದರ್ಭ ಆದಿವಾಸಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು,

(ಮೊದಲ ಪುಟದಿಂದ) ಬಳಿಕ ಅಸಮಾಧಾನಗೊಂಡ ಗಿರಿಜನರು ಕಾಲ್ನಡಿಗೆಯ ಮೂಲಕ ಮಾಲ್ದಾರೆಯ ಮುಖ್ಯರಸ್ತೆಯವರೆಗೆ ತೆರಳಿ ಬಳಿಕ ಅಲ್ಲಿಂದ ಮಡಿಕೇರಿಗೆ ವಾಹನದ ಮೂಲಕ ತೆರಳಿದರು. ಸುಮಾರು 20 ಕ್ಕೂ ಅಧಿಕ ವಾಹನದಲ್ಲಿ ಗಿರಿಜನರು ತೆರಳಿದ್ದು, ದಿಕ್ಕಾರ ಘೋಷಣೆಯ ನಾಮಫಲಕಗಳನ್ನು ಹೊತ್ತುಕೊಂಡು ಹೋಗುವ ದೃಶÀ್ಯ ಕಂಡುಬಂತು.

ಕಾಡಿನಲ್ಲಿ ಟ್ರಾಫಿಕ್ ಜಾಮ್

ಪಟ್ಟಣದಲ್ಲಿ ವಾಹನ ದಟ್ಟಣೆಯಿಂದ ಸದಾ ಟ್ರಾಫಿಕ್ ಜಾಮ್ ಸಂಭವಿಸುವದು ಸಹಜ. ಆದರೆ ದಿಡ್ಡಳ್ಳಿ ಕಾಡಿನಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಭೇಟಿ ನೀಡಿದ ಸಂದರ್ಭ ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ದಂಡೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ವಾಹನಗಳು ಸೇರಿದಂತೆ ಪೊಲೀಸ್ ಇಲಾಖೆಯ ವಾಹನಗಳ ಸಂಖ್ಯೆ ಅಧಿಕವಾಗಿ, ಕಾಡಿನಲ್ಲಿ ಹಿಂದೆಂದೂ ಕಾಣದಷ್ಟು ಟ್ರಾಫಿಕ್ ಜಾಮ್ ಸಂಭವಿಸಿತ್ತು. ನಿಶ್ಯಬ್ಧವಾಗಿದ್ದ ಕಾಡಿನಲ್ಲಿ ವಾಹನಗಳ ಸದ್ದು ಜೋರಾಗಿತ್ತು.

ಕಳೆದ 16 ದಿನಗಳಿಂದ ಗುಡಿಸಲು ಕಳೆದುಕೊಂಡ ನಿರಾಶ್ರಿತರು, ಮರದ ಕೆಳಗೆ ವಾಸ ಮಾಡಿಕೊಂಡಿದ್ದು, ದಿನಂಪ್ರತಿ ರಾಜ್ಯ ಸರಕಾರದ ಸಚಿವರುಗಳು, ಶಾಸಕರು ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರು ಆಗಮಿಸಿ ವಿವಿಧ ರೀತಿಯ ಆಶ್ವಾಸನೆಯನ್ನು ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಆದಿವಾಸಿಗಳಿಗೆ ಶಾಶ್ವತ ಸೂರು ಸಿಗಬಹುದೇ ಎಂಬದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. -ವರದಿ: ಎ.ಎನ್.ವಾಸು