ಸಿದ್ದಾಪುರ, ಡಿ. 30: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕಾರ್ಮಿಕ ಚೆಲುವ ಕುಟುಂಬಕ್ಕೆ ವಡ್ಡರಕಾಡು ತೋಟದ ಮಾಲೀಕರು ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಾರ್ಮಿಕರು ಹಾಗೂ ಸಂಬಂಧಿಕರು ಆಹೋರಾತ್ರಿ ನಡೆಸಿದ ಪ್ರತಿಭಟನೆಯ ಫಲವಾಗಿ ಕೊನೆಗೂ ಮಾಲೀಕ ಮುತ್ತಪ್ಪ ಚೆಟ್ಟಿಯಾರ್ ಪ್ರತಿಭಟನೆಗೆ ಮಣಿದು ಮೃತ ಚೆಲುವನ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರದ ಚೆಕ್ ನೀಡಿದ್ದಾರೆ.

ತಾ. 29 ರಂದು ತೋಟದಲ್ಲಿ ಕೆಲಸದ ನಿಮಿತ್ತ ಕಾರ್ಮಿಕ ಚೆಲುವ ಟ್ರಾಕ್ಟರ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆಯೊಂದು ದಿಢೀರನೆ ಧಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಚೆಲುವ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ತೋಟದ ವ್ಯವಸ್ಥಾಪಕರು ಹಾಗೂ ಮೇಸ್ತ್ರಿ ವಿರುದ್ಧ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು. ಬಳಿಕ ಮಾಲೀಕರು ಸ್ಥಳಕ್ಕೆ ಆಗಮಿಸಿಬೇಕು ಹಾಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರಲ್ಲದೇ ಮೃತದೇಹವನ್ನು ಸ್ಥಳದಿಂದ ಸಾಗಿಸಲು ಬಿಡುವದಿಲ್ಲವೆಂದು ಬಿಗಿಪಟ್ಟು ಹಿಡಿದಿದ್ದರು. ಈ ಸಂದರ್ಭ ಮೇಸ್ತ್ರಿ ಮೊಯ್ದು ವಿರುದ್ಧ ಹರಿದಾಯ್ದ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ನೂಕಾಟ ತಳ್ಳಾಟ ನಡೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆದರೇ ಮಾಲಿಕರು ರಾತ್ರಿಯವರೆಗೂ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ತೋಟದಲ್ಲಿಯೇ ಇರಿಸಿ ಬೆಳಗ್ಗಿನವರೆಗೆ ಪ್ರತಿಭಟಿಸಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ತೋಟದ ಮಾಲೀಕರು ತಮಿಳುನಾಡಿನಿಂದ ಸಿದ್ದಾಪುರಕ್ಕೆ ಆಗಮಿಸಿ, ಮೃತರ ಕುಟುಂಬಕ್ಕೆ ರೂ. 2 ಲಕ್ಷ ಚೆಕ್ ನೀಡಿದರು. ತದನಂತರ ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತ್ತು.

ಈ ಸಂದರ್ಭ ತಾ.ಪಂ ಸದಸ್ಯೆ ಚಿನ್ನಮ್ಮ ಸೇರಿದಂತೆ ಇನ್ನಿತರರು ಇದ್ದರು.