ಮಡಿಕೇರಿ, ನ. 3: ನಗರದ ಹೈಟೆಕ್ ಮಾರುಕಟ್ಟೆ ಕಾಮಗಾರಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 88ಲಕ್ಷ ರೂ. ಹಣ ನೀಡಲು ನಗರಸಭಾ ತುರ್ತು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಕಟ್ಟಡದ ಗುಣಮಟ್ಟದ ದೃಷ್ಟಿಯಿಂದ ಹೆಚ್ಚುವರಿ ಕೆಲಸಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ 88ಲಕ್ಷ ವೆಚ್ಚವಾಗಿರುವದಾಗಿ ಸಂಬಂಧಿಸಿದ ಗುತ್ತಿಗೆದಾರರು ನಗರಸಭೆಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ತುರ್ತು ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ನಗರಸಭೆಗೆ ಮಳಿಗೆಗಳಿಂದ ಬರುವ ಬಾಡಿಗೆ ಹಣವನ್ನು ಹೊಂದಿಸಿಕೊಂಡು ಆ ಹಣವನ್ನು ಮಾರುಕಟ್ಟೆ ಕಾಮಗಾರಿಯ ಹೆಚ್ಚುವರಿ ವೆಚ್ಚಕ್ಕೆ ಸರಿದೂಗಿಸಲು ನಿರ್ಧರಿಸಲಾಯಿತು.
ಮಾತ್ರವಲ್ಲದೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಕಾಮಗಾರಿ ಶೀಘ್ರ ಪೂರ್ಣ ಗೊಳ್ಳುವಂತೆ ಗುತ್ತಿಗೆದಾರರಿಗೆ ಕೆಲ ಷರತ್ತುಗಳನ್ನು ವಿಧಿಸಿ ಹಣ ಪಾವತಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸದಸ್ಯರುಗಳಾದ ಕೆ.ಎಸ್. ರಮೇಶ್, ನಂದಕುಮಾರ್, ಪ್ರಕಾಶ್ ಆಚಾರ್ಯ, ಉದಯಕುಮಾರ್, ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ, ತಜಸ್ಸುಂ, ಅಮೀನ್ ಮೊಹಿಸಿನ್, ಪೀಟರ್, ಮನ್ಸೂರ್ ಮತ್ತಿತರರು ಚರ್ಚೆಯಲ್ಲಿ ಭಾಗಿಗಳಾದರು.
ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಗಮನಕ್ಕೆ ಬಾರದೆ ಭೂ ಪರಿವರ್ತನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚೆ - ವಿಚರ್ಚೆ ನಡೆಯಿತು. ಜಲಮೂಲಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತೆ ವಹಿಸಲು ತೀರ್ಮಾನಿಸಲಾಯಿತು. ಭೂ ಪರಿವರ್ತನೆ ವೇಳೆ ಸಂಬಂಧಿಸಿದ ಇಲಾಖೆಗಳಿಗೆ ನಗರಸಭೆಯಿಂದ ನಿರಾಪೇಕ್ಷಣಾ ಪತ್ರ ಪಡೆಯುವಂತೆ ಪತ್ರ ಬರೆಯಲು ನಿರ್ಧರಿಸಲಾಯಿತು. ನಗರಸಭಾ ಆಯುಕ್ತೆ ಪುಷ್ಪಾವತಿ ಉಪಸ್ಥಿತರಿದ್ದರು.