ಕುಶಾಲನಗರ, ನ 23: ಕೂಡಿಗೆ ಕೈಗಾರಿಕಾ ಕೇಂದ್ರದಲ್ಲಿರುವ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡುವ ಅಧಿಕಾರಿಗಳು ಮಾಮೂಲಿ ಪಡೆಯುವ ಮೂಲಕ ಸಬಲೀಕರಣದತ್ತ ಸಾಗುವ ಮಹಿಳೆಯರ ಅಭಿವೃದ್ಧಿಗೆ ಕಂಟಕರಾಗುತ್ತಿರುವ ಬಗ್ಗೆ ಮಾಹಿತಿಗಳು ಹೊರ ಬಿದ್ದಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬ ಮಾಮೂಲಿ ಪಡೆಯುವ ಸಂದರ್ಭ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಒಂದರಲ್ಲಿ ಲಂಚ ಪಡೆಯುತ್ತಿರುವ ದೃಶ್ಯ ದಾಖಲಾಗಿದೆ.ಕಳೆದ ಹಲವು ವರ್ಷಗಳಿಂದ ಮಹಿಳೆಯರು ತಮ್ಮ ಸ್ವಂತ ಬಲದಿಂದ ಶ್ರಮವಹಿಸಿ ಸಂಘ ನಿರ್ಮಿಸಿ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕುಗಳ ಅಂಗನವಾಡಿ ಮತ್ತು ಗರ್ಭಿಣಿ ಸ್ತ್ರೀಯರು, ಮಕ್ಕಳಿಗೆ ಪೌಷ್ಠಿಕ ಆಹಾರ ಉತ್ಪಾದಿಸಿ ಸರಬರಾಜು ಮಾಡುತ್ತಿರುವದು ಕಾಣಬಹುದು. ಇಲ್ಲಿ ಅಂಗನವಾಡಿಗೆ ಸಾಂಬಾರು ಹುಡಿ, ಹೆಸರು ಕಾಳು, ತೊಗರಿ ಬೇಳೆ, ಹೆಸರು ಬೇಳೆ, ನ್ಯೂಟ್ರಿನ್ ಪೌಡರ್, ಗೋಧಿ, ಬೆಲ್ಲ ಇತ್ಯಾದಿ ಪುಡಿಗಳನ್ನು ಉಚಿತ ಸರಬರಾಜು ಮಾಡಲಾಗುತ್ತಿದೆ. ನಂತರ ವೆಚ್ಚವಾಗಿರುವ ಹಣವನ್ನು ಸಂಬಂಧಿಸಿದ ಇಲಾಖೆ ಬಿಡುಗಡೆಗೊಳಿಸುತ್ತದೆ. ಆದರೆ ಹಣ ಬಿಡುಗಡೆಯಾಗಬೇಕಾದರೆ ಹಂತಹಂತವಾಗಿ ಲಂಚಾವತಾರದ ಕಾಣದ ಕೈಗಳು ಈ ಸಂಸ್ಥೆಯ ಆದಾಯಕ್ಕೆ ಕಂಟಕಪ್ರಾಯವಾಗುವ ದರೊಂದಿಗೆ ಮಹಿಳೆಯರ ಏಳಿಗೆಗೆ ಕುತ್ತು ಉಂಟುಮಾಡುತ್ತಿವೆ.

ಕಷ್ಟಪಟ್ಟು ದುಡಿಯುತ್ತಿರುವ ಈ ಬಡ ಮಹಿಳಾ ಘಟಕದ ಮೇಲೆ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳ ಕೆಂಗಣ್ಣು ಆಗಾಗ್ಗೆ ಬೀಳುತ್ತಿದ್ದು ಇದರಿಂದ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಬಡ ಮಹಿಳೆಯರಿಗೆ ಕಂಟಕ ಪ್ರಾಯರಾಗುವದ ರೊಂದಿಗೆ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗಲಾರದು.