ಕುಶಾಲನಗರ, ನ. 27: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಮಾಮೂಲಿ ಚಾಳಿ ಸಂದರ್ಭ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ‘ಶಕ್ತಿ’ಯ ಸ್ಫೋಟಕ ವರದಿ ಪ್ರಕಟಗೊಂಡ ಬೆನ್ನಲ್ಲೇ ತನಿಖಾ ತಂಡವೊಂದು ಮಾಹಿತಿ ಕಲೆಹಾಕುತ್ತಿರುವ ನಡುವೆಯೇ ಇಲಾಖೆಯ ಜಿಲ್ಲಾ ಪ್ರಬಾರ ಉಪ ನಿರ್ದೇಶಕರು ತಕ್ಷಣ ಮೈಸೂರಿಗೆ ವರ್ಗಾವಣೆಗೊಂಡಿದ್ದಾರೆ.
ಕುಶಾಲನಗರ ಸಮೀಪ ಕೂಡುಮಂಗಳೂರು ಕೈಗಾರಿಕಾ ಬಡಾವಣೆಯಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರದಿಂದ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಮಾಮೂಲಿ ವಸೂಲಿ ಮಾಡುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಪಡೆಯಲು ತನಿಖಾ ತಂಡವೊಂದನ್ನು ರಚಿಸಲಾಗಿತ್ತು.
ಈ ಮೂಲಕ ತನಿಖಾ ತಂಡ ಕೂಡ್ಲೂರು ಕಚೇರಿಗೆ ಭೇಟಿ ನೀಡಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಮಾಹಿತಿಯನ್ನು ಪಡೆಯುವದರೊಂದಿಗೆ ಸಂಸ್ಥೆಯ ಮಹಿಳಾ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿತ್ತು. ಆದರೆ ಮಾಹಿತಿ ತಿಳಿದು ಬಂದ ಪ್ರಕಾರ ಮಾಮೂಲಿ ವಸೂಲಿ ಮಾಡಿದ ಅಧಿಕಾರಿ ಮತ್ತು ಇಲಾಖೆಯ ಕೆಲವರು ಸೇರಿ ಎರಡು ದಿನಗಳ ಕಾಲದ
(ಮೊದಲ ಪುಟದಿಂದ) ಸಿಸಿ ಕ್ಯಾಮೆರ ದೃಶ್ಯಾವಳಿಗಳನ್ನು ಡಿಲೀಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಆದರೆ ಇದಕ್ಕಿಂತ ಮೊದಲೇ ಈ ದೃಶ್ಯಾವಳಿಗಳು ಹಲವರ ಮೊಬೈಲ್‍ಗಳಲ್ಲಿ ರಾರಾಜಿಸುತ್ತಿರುವ ಬಗ್ಗೆಯೂ ಗುಸುಗುಸು ಕೇಳಿಬರುತ್ತಿದೆ. ಪ್ರಬಾರ ಉಪನಿರ್ದೇಶಕರು ಇದೀಗ ಮೈಸೂರಿಗೆ ವರ್ಗಾವಣೆಯಾಗಿದ್ದು, ಜಿಲ್ಲೆಯಲ್ಲಿ ‘ಶಕ್ತಿ’ ವರದಿ ಎಲ್ಲಾ ಇಲಾಖೆಗಳಲ್ಲಿಯೂ ಹಾಗೂ ಮಾಮೂಲಿ ವಸೂಲಿಗಾರರಲ್ಲಿ ಸಂಚಲನ ಮೂಡಿಸಿದ್ದರೆ ಇತ್ತ ಎಂಎಸ್‍ಪಿಸಿ ಕೇಂದ್ರದ ಬಡ ಮಹಿಳೆಯರು ಮಾತ್ರ ಮಾಮೂಲಿ ಚಾಳಿಯಿಂದ ಸದ್ಯ ಬಚಾವಾದಂತಾಗಿದೆ ಎನ್ನಬಹುದು. - ಸಿಂಚು