ಸೋಮವಾರಪೇಟೆ,ಡಿ.6: ತಾಲೂಕಿನ ಮಾದಾಪುರ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಸೇರಿದಂತೆ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರ ಗುಂಪು, ರೂ. 5,700 ನಗದನ್ನು ಅಪಹರಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಮಾದಾಪುರದ ಸರ್ಕಾರಿ ಪ್ರೌಢಶಾಲೆಯ ಬಾಗಿಲಿನ ಬೀಗ ಒಡೆದಿರುವ ಕಳ್ಳರು ಒಳನುಗ್ಗಿ ಮಕ್ಕಳ ಪ್ರವಾಸಕ್ಕೆಂದು ಸಂಗ್ರಹಿಸಿದ್ದ ರೂ. 2ಸಾವಿರ ನಗದು, ಪ್ರಾಥಮಿಕ ಶಾಲೆಯ ಕೊಠಡಿ ಮುರಿದು 3,200 ನಗದನ್ನು ಅಪಹರಿಸಿದೆ. ಇದರೊಂದಿಗೆ ಕಂಪ್ಯೂಟರ್ ಕೊಠಡಿಯ ಬೀಗ ಒಡೆದು ಕೀಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ.
ಶಾಲೆಯ ಒಳಗಿದ್ದ ಒಟ್ಟು 6 ಅಲ್ಮೆರಾಗಳನ್ನು ಒಡೆದು ನಗದು ಹಣಕ್ಕಾಗಿ ತಡಕಾಡಿದ್ದಾರೆ. ನಂತರ ತೊಟಗಾರಿಕಾ ಇಲಾಖಾ ಕಚೇರಿಗೆ ನುಗ್ಗಿ ಮೂರು ಅಲ್ಮೆರಾಗಳನ್ನು ಒಡೆದಿದ್ದಾರೆ. ಮಾದಾಪುರದಲ್ಲಿ ಒಂದೇ ದಿನ ರಾತ್ರಿ ಸರಣಿ ಕಳ್ಳತನ ನಡೆದಿರುವದು ಈ ಭಾಗದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಶಾಲಾ ಮುಖ್ಯೋಪಾಧ್ಯಾಯ ಪುಟ್ಟಪ್ಪ ಅವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸ್ ಠಾಣೆಯ ಅರಪಾಧ ವಿಭಾಗದ ಎಸ್.ಐ. ಮಂಚಯ್ಯ, ಎಎಸ್‍ಐ ರವೀಂದ್ರನಾಥ್, ಸಿಬ್ಬಂದಿಗಳಾದ ಶಶಿ, ಸಂದೇಶ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಗೆ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಂ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹಸೈನಾರ್, ಮೊಣ್ಣಪ್ಪ ಅವರುಗಳು ಭೇಟಿ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವದರೊಂದಿಗೆ ಡಿ ಗ್ರೂಪ್ ನೌಕರರನ್ನು ನಿಯೋಜಿಸಬೇಕೆಂದು ಮಾದಾಪುರ ಗ್ರಾ.ಪಂ. ಸದಸ್ಯ ಮಜೀದ್ ಆಗ್ರಹಿಸಿದ್ದಾರೆ. ಶಾಲೆಯೊಳಗೆ ನುಗ್ಗಿ ನಗದು ಅಪಹರಿಸಿರುವ ಕಳ್ಳರನ್ನು ತಕ್ಷಣ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.