ಕುಶಾಲನಗರ, ಜು. 6: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ಮಾದಪಟ್ಟಣ ಶ್ರೀ ಜೋಡಿ ಬಸವೇಶ್ವರ ಯುವಕ ಸಂಘ ಹಾಗೂ ನ್ಯೂ ಫ್ರೆಂಡ್ಸ್ ಯುವಕ ಸಂಘದ ಆಶ್ರಯದಲ್ಲಿ ಮಾದಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉದ್ಯೋಗಖಾತ್ರಿa ಯೋಜನೆಯಡಿ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಪರಿಸರದ ಸುತ್ತಮುತ್ತ ಮರ-ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಕಾಳಜಿ ತೋರಬೇಕು ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ಪಂಚಾಯಿತಿ ವತಿಯಿಂದ 2 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ. ಈ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಒತ್ತು ನೀಡಲಾಗುವದು ಎಂದರು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ, ಟಿ.ಬಿ. ಪ್ರಸನ್ನ, ಪ್ರವೀಣ್ ಕುಮಾರ್, ಶಿವಪ್ಪ, ನಾರಾಯಣ, ರವಿ, ಪುಷ್ಪಲತಾ, ಶೋಭಾ, ತಾ.ಪಂ. ಮಾಜಿ ಸದಸ್ಯ ಸತೀಶ್, ಮುಖ್ಯ ಶಿಕ್ಷಕಿ ಕೆ.ಸಿ. ದೇವಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಎನ್.ಸಿ. ಸುರೇಶ್ ಕುಮಾರ್, ಜೋಡಿ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎಂ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮಹಾದೇವ, ಮನೋಜ್, ಚಂದ್ರು ಮತ್ತಿತರರು ಇದ್ದರು.