ಮಡಿಕೇರಿ, ನ. 26: ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ಸಮಸ್ತ ಕೊಡಗು ಸುನ್ನಿ ಬಾಲ ವೇದಿಕೆ ವತಿಯಿಂದ ಡಿ. 1 ರಿಂದ 30 ರವರೆಗೆ ಜಿಲ್ಲೆಯ ಎಲ್ಲಾ ಮದರಸಗಳಲ್ಲಿ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಪ್ರಮುಖರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಎ.ಇ. ಫರ್‍ಹಾನ್ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮಾದಕ ವಸ್ತುಗಳಿಗೆ ದಾಸರಾಗುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಪೋಷಕರು ಹಾಗೂ ಪೊಲೀಸ್ ಅಧಿಕಾರಿಗಳು ನಿಗಾ ವಹಿಸುವ ಮೂಲಕ ದುಶ್ಚಟ ಮುಕ್ತಗೊಳಿಸಲು ಮುಂದಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತುಗಳು ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ದಂಧೆ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎ.ಇ. ಫರ್‍ಹಾನ್ ಒತ್ತಾಯಿಸಿದರು.
1993 ರಲ್ಲಿ ಸ್ಥಾಪನೆಯಾದ ಮದರಸ ವಿದ್ಯಾರ್ಥಿ ಸಂಘಟನೆಯಾದ ಸಮಸ್ತ ಕೊಡಗು ಸುನ್ನಿ ಬಾಲ ವೇದಿಕೆ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುವದನ್ನು ತಡೆಯಲು ಒಂದು ತಿಂಗಳ ಕಾಲ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದರು. ಸಂಘ-ಸಂಸ್ಥೆಗಳು ಮಾತ್ರವಲ್ಲದೆ ಪೋಷಕರು ಹಾಗೂ ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಬೇಕೆಂದು ಎ.ಇ. ಫರ್‍ಹಾನ್ ಹೇಳಿದರು. ವೇದಿಕೆಯ ಕಾರ್ಯದರ್ಶಿ ಶಕೀಲ್ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆ ಕಾಯ್ದೆಯನ್ನು ವಿರೋಧಿಸಿದರು.
ಗೋಷ್ಠಿಯಲ್ಲಿ ಉಪ ಕಾರ್ಯದರ್ಶಿ ಎ.ಹೆಚ್. ಮುಹಮ್ಮದ್ ಶಾಹಿದ್, ಸಿದ್ದಾಪುರ ರೇಂಜ್ ಅಧ್ಯಕ್ಷ ಶಾಕಿರ್ ಹಾಗೂ ಸದಸ್ಯರಾದ ಮಹಮ್ಮದ್ ತನ್ಸೀರ್ ಉಪಸ್ಥಿತರಿದ್ದರು.