ಮಡಿಕೇರಿ, ಜು. 20 : ಮಾದಕ ವಸ್ತುವನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾ. 27.2.2010ರಲ್ಲಿ ಗೋಣಿಕೊಪ್ಪ ಪ್ರಣಾಮ್ ಇಂಟರ್‍ನ್ಯಾಷನಲ್ ಹೊಟೇಲ್‍ನಲ್ಲಿ ಅಕ್ರಮವಾಗಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ವಯ ಪೊಲೀಸರು ಧಾಳಿ ನಡೆಸಿ ಆರೋಪಿಗಳಾದ ಪಾಂಡಿಯನ್, ಎ. ಉಮೇಶ್, ಕೆ.ಸಿ. ರಮೇಶ್ ಇವರುಗಳನ್ನು ಬಂಧಿಸಿದ್ದರು. ಒಟ್ಟು 816 ಗ್ರಾಂ, 100 ಮಿ.ಗ್ರಾಂ.ನಷ್ಟು ಬ್ರೌನ್ ಶುಗರ್ ಪತ್ತೆಯಾಗಿತ್ತು. ಬಂಧಿತರಿಗೆ ಬ್ರೌನ್ ಶುಗರ್ ಅನ್ನು ಮಾರಾಟ ಮಾಡಲು ನೀಡಿದ್ದ ಪಿ. ವೆಂಕಟೇಶ್ ಹಾಗೂ ವೈ. ಕುಮಾರೇಶ್ ಇವರುಗಳನ್ನು ಕೂಡ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ.ಜೆ.ಎಂ.ಎಂ. ಮಹಾ ಸ್ವಾಮೀಜಿಯವರು ಐವರು ಆರೋಪಿಗಳ ಮೇಲೆ ಆರೋಪÀ ಸಾಬೀತಾದ್ದರಿಂದ 10 ವರ್ಷಗಳ ಕಾರಾಗೃಹ ವಾಸ ಹಾಗೂ 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎ.ಪಿ. ಫಿರೋಜ್‍ಖಾನ್ ವಾದ ಮಂಡಿಸಿದರು.