ಮಡಿಕೇರಿ, ಜೂ. 1 : ರಾಜ್ಯದ ಪೊಲೀಸರು ಜೂ.4 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಬಗ್ಗೆ ಪುನರ್ ವಿಮರ್ಶೆ ಮಾಡಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬೇಕೆಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆ ಸಲಹೆ ನೀಡಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಹರೀಶ್ ಆಚಾರ್ಯ ಒಂದು ದಿನದ ಪ್ರತಿಭಟನೆಯಿಂದ ಕೆಲಸ ಕಳೆದುಕೊಳ್ಳುವ ಬದಲು ಬೇಡಿಕೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವದು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದಾರೆ.

ಮೇಲಧಿಕಾರಿಗಳಿಂದ ಕಿರುಕುಳ, ರಜೆ ಇಲ್ಲದೆ ನಿರಂತರ ಸೇವೆ, ಕಡಿಮೆ ಸಂಬಳ, ವಸತಿ ಗೃಹಗಳ ದುರಾವಸ್ಥೆ ಈ ಎಲ್ಲ ಸಂಕಷ್ಟಗಳು ಬಗೆ ಹರಿಯಲೇಬೇಕಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಳು ಕೂಡ ಮನುಷ್ಯರೇ ಆಗಿರುವದರಿಂದ ಮೂಲಭೂತ ಸೌಲಭ್ಯಗಳನ್ನು ಕೇಳುವ ಹಕ್ಕು ಇವರಿಗೂ ಅನ್ವಯವಾಗುತ್ತದೆ. ಆದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪೊಲೀಸ್ ಇಲಾಖೆಯಲ್ಲಿಯೇ ಪ್ರತಿಭಟನೆ ಯಂತಹ ಬೆಳವಣಿಗೆಗಳು ಕಂಡು ಬಂದರೆ ಸಾಮಾನ್ಯ ಜನರ ಸ್ಥಿತಿಗತಿ ಏನು ಎಂದು ಪ್ರಶ್ನಿಸಿರುವ ಹರೀಶ್ ಆಚಾರ್ಯ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಬಹುದಾದ ಸಮಸ್ಯೆ ಇದಾಗಿದ್ದು, ಈ ನಿಟಿನಲ್ಲಿ ಸರಕಾರವೂ ಮುಂದಾಗಬೇಕಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಇಲಾಖೆಯ ಸಿಬ್ಬಂದಿಗಳಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ರಸ್ತೆಗಿಳಿದು ಪ್ರತಿಭಟನೆ ಮಾಡದೆ, ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿ ಗಳಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ, ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುವ ಮೂಲಕ ಸರಕಾರದ ಗಮನ ಸೆಳೆಯಲಿದೆ ಎಂದರು.