ಕುಶಾಲನಗರ, ಜ. 10: ಕುಶಾಲನಗರದ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಸಂಘದ ಸದಸ್ಯರು ಹಾಗೂ ಕುಟುಂಬ ವರ್ಗದವರಿಗೆ ಸಂತೋಷ ಕೂಟ ಕಾರ್ಯಕ್ರಮ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಇಸಿಹೆಚ್‍ಎಸ್‍ನ ಲೆ.ಕ. ಪಿ.ಬಿ. ಅಯ್ಯಪ್ಪ ಮಾತನಾಡಿ, ಸರಕಾರ ಮಾಜಿ ಸೈನಿಕರಿಗಾಗಿಯೇ ವಿಶೇಷ ಪಿಂಚಣಿ ಸೌಲಭ್ಯ, ವೈದ್ಯಕೀಯ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಿದೆ. ಸಂಘದ ಸದಸ್ಯತ್ವ ಪಡೆಯದೆ ಇರುವ ಮಾಜಿ ಸೈನಿಕರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸರಕಾರ ಒದಗಿಸಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸಂಘದ ಕಚೇರಿಯ ಸ್ಥಳ ದಾನಿಗಳಾದ ಕೆದಂಬಾಡಿ ಸಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ.ಎನ್. ಮೊಣ್ಣಪ್ಪ ಪ್ರಾಸ್ತಾವಿಕ ನುಡಿಗಳಾಡಿದರು. ಮಾಜಿ ಅಧ್ಯಕ್ಷ ಭಾಸ್ಕರ್ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.

ಸಂಘದ ಗೌರವಾಧ್ಯಕ್ಷ ಆರ್.ವಿ. ನಾರಾಯಣಮೂರ್ತಿ, ಕಾರ್ಯದರ್ಶಿ ಎಸ್.ಆರ್. ಮಾದಪ್ಪ, ಸಂತೋಷ ಕೂಟದ ಕಾರ್ಯಾಧ್ಯಕ್ಷ ಪಿ.ಕೆ. ಜಗದೀಶ್, ಅಂತರರಾಷ್ಟ್ರೀಯ ಶೂಟರ್ ಕ್ಯಾ. ಸುಬ್ಬಯ್ಯ, ಸಂಘದ ಪದಾಧಿಕಾರಿ ನರೇಶ್ ಕುಮಾರ್ ಮತ್ತಿತರರು ಇದ್ದರು. ಇದೇ ಸಂದರ್ಭ ಸದಸ್ಯರು ಹಾಗೂ ಕುಟುಂಬ ವರ್ಗದವರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.