ಮಡಿಕೇರಿ, ಜ. 20: ಕೊಡಗು ಜಿಲ್ಲಾ ವ್ಯಾಪ್ತಿಯ ಮಾಜಿ ಸೈನಿಕರ ಸಂಕಷ್ಟ ನಿವಾರಣೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ - ಸಂಸ್ಥೆಗಳ ಸಹಕಾರದೊಂದಿಗೆ ಮಾಜಿ ಸೈನಿಕರು ಪ್ರತಿಭಟನೆ ನಡೆಸಿ ಸಂಕಷ್ಟ ನಿವಾರಣೆಗೆ ಮೂರು ತಿಂಗಳ ಗಡುವು ವಿಧಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಾಜಿ ಸೈನಿಕರ ಸಂಕಷ್ಟಗಳಿಗೆ ಕಳೆದ ಎರಡು ದಶಕಗಳಿಂದ ಆಡಳಿತ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪ ಕೇಳಿ ಬಂದಿತು. ಅಮ್ಮತ್ತಿಯ ನಿವೃತ್ತ ಯೋಧರ ಅಧೀನದಲ್ಲಿರುವ ಕೃಷಿ ಜಾಗ ತೆರವು ಯತ್ನ ಮತ್ತು ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ ಕ್ರಮಕ್ಕೂ ಖಂಡನೆ ವ್ಯಕ್ತವಾಯಿತು.
ನಗರದ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ 5 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದರು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾ ಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸೈನಿಕರಿಗೆ ದುರ್ಗತಿ ನೋವಿನ ವಿಚಾರ : ಶಾಸಕ ಕೆ.ಜಿ. ಬೋಪಯ್ಯ
ದೇಶದ ಗಡಿಕಾದು ಜನರ ರಕ್ಷಣೆ ಮಾಡಿದ ಬಳಿಕ ತಮ್ಮೂರಿಗೆ ಬಂದು ನೆಲೆಸಿದ ಮಾಜಿ ಸೈನಿಕರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮೆರವಣಿಗೆಯಲ್ಲಿ ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಬೇಕಾದ ದುರ್ಗತಿ ಬಂದಿರುವದು ತೀರಾ ನೋವಿನ ವಿಚಾರವೆಂದು ಶಾಸಕ ಕೆ.ಜಿ. ಬೋಪಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಸೈನಿಕರ ಬೇಡಿಕೆಗಳೆಲ್ಲವೂ ಈಡೇರಿಸುವಂತಹದಾಗಿದೆ. ಯಾವದೇ ಬೇಡಿಕೆಗಳ ತಿರಸ್ಕಾರ ಅಸಾಧ್ಯ. ಇಂದು ಮಾಜಿ ಸೈನಿಕರ
(ಮೊದಲ ಪುಟದಿಂದ) ವಿರುದ್ಧ ದೌರ್ಜನ್ಯ ಎಲ್ಲೆಡೆ ಕಂಡುಬರುತ್ತಿದೆ. ಕ್ಯಾನ್ಸರ್ ಪೀಡಿತ ವಿಧವಾ ಮಹಿಳೆಯ ಮನೆಯನ್ನೂ ಜಿಲ್ಲಾಡಳಿತ ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೈಸಾರಿ ಭೂಮಿಯಲ್ಲಿ ಕೃಷಿ ಮಾಡಿದಲ್ಲಿ ಆ ಭೂಮಿಯನ್ನು ಯಾರ ಸ್ವಾಧೀನದಲ್ಲಿದೆಯೋ ಅವರಿಗೆ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಈಡೇರಿಸಬೇಕಾದ ಬೇಡಿಕೆಯ ಬಗ್ಗೆ ಕೇಂದ್ರದೊಂದಿಗೆ ಸಮಾಲೋಚಿಸು ವದಾಗಿ ಬೋಪಯ್ಯ ಭರವಸೆ ನೀಡಿದರು.
ಕಂಪೆನಿಗಳ ಒತ್ತುವರಿ ತೆರವುಗೊಳಿಸಿ : ರಂಜನ್
ಜಿಲ್ಲೆಗೆ ಆಗಮಿಸುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಜಿಲ್ಲೆಯನ್ನು ಹಾಡಿ ಹೊಗಳಿ ತೆರಳುತ್ತಾರೆ. ಆದರೆ ಇಲ್ಲಿನ ಮೂಲ ಸಮಸ್ಯೆಗಳ ಬಗ್ಗೆ ಯಾರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ಒತ್ತುವರಿ ಮಾಡಿರುವ ಜಾಗವನ್ನು ಮೊದಲು ತೆರವುಗೊಳಿಸುವಂತೆ ಆಗ್ರಹಿಸಿದರು.
ಮಾಜಿ ಸೈನಿಕರ ಜಾಗ ತೆರವು ಹೀನ ಕೃತ್ಯವೆಂದ ಅವರು, ಮಾಜಿ ಸೈನಿಕರಿಗೆ ಅಧಿಕಾರಿಗಳು ತೊಂದರೆ ನೀಡುವದಾದರೆ ಜಿಲ್ಲೆಯಲ್ಲಿ ಯಾರಿಗೆ ರಕ್ಷಣೆ ಇದೆ ಎಂದು ಪ್ರಶ್ನಿಸಿದರು. ಆದ್ಯತೆಯ ಮೇಲೆ ಮಾಜಿ ಸೈನಿಕರಿಗೆ ಜಾಗ ನೀಡಲು ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ ಅವರು, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸೈನಿಕರ ಸಂಘದ ಸೋಮವಾರಪೇಟೆ, ಶನಿವಾರಸಂತೆ, ವೀರಾಜಪೇಟೆ, ಮಡಿಕೇರಿ, ಕುಶಾಲನಗರ, ಕೊಡ್ಲಿಪೇಟೆ, ಚೇರಂಬಾಣೆ, ನಾಪೋಕ್ಲು ಘಟಕದ ಪದಾಧಿಕಾರಿಗಳು, ಜಯ ಕರ್ನಾಟಕ, ಅಮ್ಮತ್ತಿ ಕೊಡವ ಸಮಾಜ, ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘ, ಬೆಳೆಗಾರರ ಒಕ್ಕೂಟ ನಾಪೋಕ್ಲು ಹಾಗೂ ಶ್ರೀಮಂಗಲ, ಕಾರ್ಯಪ್ಪ ಅಭಿಮಾನಿಗಳ ಸಂಘ, ಆಮ್ ಆದ್ಮಿ, ಬಿಜೆಪಿ ಇನ್ನಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದವು.
ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕರ್ನಲ್ ಚಂಗಪ್ಪ, ಕಾರ್ಯದರ್ಶಿ ಮೇ. ಚಿಂಗಪ್ಪ, ಸಂಘದ ಪ್ರಮುಖರಾದ ಕ. ಐಯ್ಯುಡ ಗಣಪತಿ, ಐ.ಕೆ. ಮಂದಣ್ಣ, ಕ.ಎಸ್.ಎ. ಚಿಣ್ಣಪ್ಪ, ಸಿ.ಕೆ. ನಂಜಪ್ಪ, ಆಮ್ ಆದ್ಮಿ ಪಕ್ಷದ ಮಾದೇಟಿರ ತಿಮ್ಮಯ್ಯ, ಬಿಜೆಪಿ ಪ್ರಮುಖರಾದ ಕಿಶೋರ್ ಕುಮಾರ್, ಮಲ್ಲಂಡ ಮಧು ದೇವಯ್ಯ, ಎಸ್.ಸಿ. ಸತೀಶ್, ಮಾಜಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಪ್ರಮುಖರಾದ ಜಿಮ್ಮಿ ನಾಣಯ್ಯ, ಬೊಟ್ಟಂಗಡ ಜಪ್ಪು ಹಾಗೂ ನೂರಾರು ಮಾಜಿ ಸೈನಿಕರು ಪಾಲ್ಗೊಂಡಿದ್ದರು.