ಸೋಮವಾರಪೇಟೆ, ಜ. 27: ಸಾಲದ ಆಸೆಯಿಂದ ಮಹಿಳೆಯರು ವಿವಿಧ ಸಂಸ್ಥೆಗಳಿಂದ ಸಾಲ ಪಡೆದು ಸಾಲದ ಶೂಲಕ್ಕೆ ಏರಬಾರದು ಎಂದು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಜಿಲ್ಲಾಧ್ಯಕ್ಷೆ ಮೇರಿ ಅಂಬುದಾಸ್ ಕಿವಿಮಾತು ಹೇಳಿದರು.ಇಲ್ಲಿಗೆ ಸಮೀಪದ ಬಜೆಗುಂಡಿಯ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಳಗುಂದದ ದುರ್ಗಾಂಭ ಹಾಗೂ ಶಾರದಾಂಭ ಸ್ತ್ರೀಶಕ್ತಿ ಗೊಂಚಲು ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಸ್ತ್ರೀಶಕ್ತಿ ಗೊಂಚಲು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸೇವೆ ಎಂಬ ಮುಖವಾಡದೊಂದಿಗೆ ಬಂದಿರುವ ವಿವಿಧ ಸಂಘ-ಸಂಸ್ಥೆಗಳು ನಮ್ಮ ಸ್ತ್ರೀಶಕ್ತಿ ಸಂಘಗಳನ್ನೇ ಬಂಡವಾಳವಾಗಿಸಿಕೊಂಡು ಅವರುಗಳಿಗೆ ಸಾಲವನ್ನು ನೀಡುತ್ತಾ ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡುತ್ತಿವೆ. ಇದೀಗ ಎರಡು ಮೂರು ಸಂಘಗಳಲ್ಲಿ ಸಾಲ ಪಡೆದುಕೊಳ್ಳುವ ಮಹಿಳೆಯರು, ಸಂಘಗಳ ಸಭೆ ಸಮಾರಂಭ ಎಂದು ಸುತ್ತುತ್ತಾ, ಇತ್ತ ಕೆಲಸಕ್ಕೂ ಹೋಗಲಾಗದೆ, ಅತ್ತ ಸಾಲ ಮರುಪಾವತಿಯೂ ಮಾಡಲಾಗದೆ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ ಎಂದರು.

ಸರಕಾರ ರಚಿಸಿದ ಸ್ತ್ರೀಶಕ್ತಿ ಸಂಘದ ಮೂಲಕ ಎಲ್ಲಾ ರೀತಿಯ ಸವಲತ್ತುಗಳು ದೊರಕುತ್ತಿದ್ದು, ಇದೀಗ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ಸಚಿವರಾಗಿ ಉಮಾಶ್ರೀಯವರು ಜವಾಬ್ದಾರಿ ವಹಿಸಿಕೊಂಡ ನಂತರದಲ್ಲಿ ವರ್ಷಕ್ಕೆ 5 ಸಾವಿರ ರೂ.ಗಳಂತೆ 5 ವರ್ಷ ನಿರಂತರವಾಗಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇಲಾಖೆಯ ಮೂಲಕ ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಹನಾ ಸುಲ್ತಾನ್ ಮಾತನಾಡಿ, ಇಂದು ಮಹಿಳೆಯರು ಪುರುಷ ಸಮಾನವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದ ಕೀರ್ತಿ ಸ್ತ್ರೀಶಕ್ತಿ ಸಂಘಕ್ಕೆ ಸಲ್ಲುತ್ತದೆ ಎಂದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಸ್ತ್ರೀಶಕ್ತಿ ಗೊಂಚಲು ಸಂಘದ ಹೋಬಳಿ ಅಧ್ಯಕ್ಷೆ ದಮಯಂತಿ ವಹಿಸಿದ್ದರು.

ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಶೋಧ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಎ. ಯಾಕೂಬ್, ಕವಿತಾ, ವೀಣಾ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಜಿಲ್ಲಾ ಉಪಾಧ್ಯಕ್ಷೆ ಎನ್.ಕೆ. ಸುಮತಿ, ತಾಲೂಕು ಕಾರ್ಯದರ್ಶಿ ಶೈಲಾ, ನಿರ್ದೇಶಕರುಗಳಾದ ಕುಶಾಲನಗರದ ಹೇಮ, ಗಣಗೂರಿನ ಪ್ರೇಮ, ಗೌಡಳ್ಳಿಯ ಸರೋಜ, ಕೊಡ್ಲಿಪೇಟೆ ಯಶೋಧ, ಶಿರಂಗಾಲದ ಲಲಿತಾ, ಮಹಿಳಾ ಮೇಲ್ವಿಚಾರಕಿ ಲೀಲಾವತಿ, ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರುಗಳಾದ ಚಂದ್ರಿಕಾ, ಪಿಲೋಮಿನಾ, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಪಲ್ಲವಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಉಪಸ್ಥಿತರಿದ್ದರು.