ಸೋಮವಾರಪೇಟೆ, ಡಿ. 21: ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕೆಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಆಶಯ ವ್ಯಕ್ತಪಡಿಸಿದರು.

ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಪಟ್ಟಣದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರೇ ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆ ಇಂದು ಎಲ್ಲಾ ರಂಗಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಪುರುಷರಿಗಿಂತ ಕಡಿಮೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು ಕೃಷಿ, ಕೈಗಾರಿಕೆ, ರಾಜಕಾರಣ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವದರೊಂದಿಗೆ ಆರ್ಥಿಕವಾಗಿಯೂ ಸದೃಢರಾಗಬೇಕಾಗಿದೆ ಎಂದರು. ಮಾರಾಟ ಮೇಳವನ್ನು ಉದ್ಘಾಟಿಸಿದ ತಾಲೂಕು ವಕ್ಕಲಿಗರ ಸಮಾಜದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಇಂತಹ ಮಾರಾಟ ಮೇಳಗಳು ಮಹಿಳೆಯರಿಗೆ ವಸ್ತುಗಳ ತಯಾರಿಕೆಗೆ ಉತ್ತೇಜನ ನೀಡುವದರೊಂದಿಗೆ ಮಾರಾಟಕ್ಕೂ ಅವಕಾಶ ಕಲ್ಪಿಸುತ್ತಿರುವದು ಶ್ಲಾಘನೀಯವಾದುದು ಎಂದರು. ಈ ಸಂದರ್ಭ ಪ್ರಗತಿಪರ ಮಹಿಳಾ ವೇದಿಕೆ ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಕಾರ್ಯದರ್ಶಿ ಸಂಗೀತಾ ದಿನೇಶ್, ಖಜಾಂಚಿ ಲಾವಣ್ಯ ಮೋಹನ್, ವಕ್ಕಲಿಗರ ಸಮಾಜದ ಕಾರ್ಯದರ್ಶಿ ಗಣಪತಿ ಸೇರಿದಂತೆ ಇತರರು ಹಾಜರಿದ್ದರು.