ಸಿದ್ದಾಪುರ, ಅ. 5: ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಂ. ನಾಗರಾಜು ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸಿದರು. ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವದರ ಕುರಿತು ತಜ್ಞರಿಂದ ಸಮಾಲೋಚಿಸಿ 1995ರಲ್ಲಿ ಅನುಷ್ಠಾನಗೊಳಿಸಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಿದೆ.

ಸಮುದಾಯದ ಶಾಸ್ತ್ರಗಳನ್ನು, ಕಾನೂನನ್ನು ಧಿಕ್ಕರಿಸಿ ಎರಡನೇ ಮದುವೆಯಾದಲ್ಲಿ ಗಂಡನಿಂದ ಆಗಲಿ ಅಥವಾ ಮಕ್ಕಳಿಗಾಗಲಿ ಜೀವನಾಂಶ ಪಡೆಯಲು ಸಾಧ್ಯವಿಲ್ಲ. ಸಂಸಾರದಲ್ಲಿ ಒಡಕ್ಕಿಲ್ಲದೆ ಪರಸ್ಪರ ಅನ್ಯೋನ್ಯತೆಯ ಬದುಕು ಸಮಾಜಕ್ಕೆ ಮಾದರಿಯಾಗ ಬಹುದು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಮನುಷ್ಯ ಜೀವನದ ಹುಟ್ಟು-ಸಾವಿನ ನಡುವೆ ಬಾಲ್ಯ-ಯೌವನ ಹಾಗೂ ಮುಪ್ಪು ಎಂಬ ಜೀವನ ಚಕ್ರವಿದೆ. ಪ್ರತಿಯೊಂದು ಹಂತ ತನ್ನದೆ ಆದ ಮಹತ್ವ ಪಡೆದುಕೊಂಡಿದೆ.

ಕಾನೂನಿನ ಅಡಿಪಾಯ ಎಂಬದು ಸಮಾಜದಲ್ಲಿನ ಮೂಲ ಭೂತ ಹಕ್ಕುಗಳೊಂದಿಗೆ ಮೂಲ ಕರ್ತವ್ಯವೂ ಕೂಡ. ಪರಿಸರದಲ್ಲಿನ ಜಲಚರಗಳು, ಕಾಡು, ಮರ, ನದಿ ಸರೋವರದ ರಕ್ಷಣೆಯೂ ನಮ್ಮ ಕರ್ತವ್ಯ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯಿಂದ ಜೀವಿಸುವ ಹಕ್ಕು ನಮ್ಮ ಸಂವಿಧಾನದಲ್ಲಿದೆ ಎಂದರು.

ವಕೀಲ ಎಂ.ಎಸ್. ವೆಂಕಟೇಶ್ “ಮಹಿಳೆಯರಿಗಾಗಿ ಕಾನೂನಿನ ಅರಿವು” ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸದಸ್ಯ ಕಾರ್ಯದರ್ಶಿ ಕೆ. ಶರ್ಮಿಳಾ ಕಾಮತ್, ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಯೋಜಕಿ ಗೀತಾ ಸತೀಶ್ ಸೇರಿದಂತೆ ಗ್ರಾಮದ ಮಹಿಳೆಯರು ಹಾಜರಿದ್ದರು.

- ಅಂಚೆಮನೆ ಸುಧಿ