ಆಲೂರು-ಸಿದ್ದಾಪುರ, ಸೆ. 28: ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗುತ್ತಿದ್ದರೂ ತನ್ನ ಮನೋಬಲದ ಕೊರತೆ ಯಿಂದಾಗಿ ಸಮಾಜದಲ್ಲಿ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಸೋಮವಾರಪೇಟೆಯ ವಕೀಲೆ ಹೆಚ್.ಆರ್. ಪವಿತ್ರ ಅಭಿಪ್ರಾಯ ಪಟ್ಟರು. ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕದ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಸೋಮವಾರ ಪೇಟೆಯ ಹಿರಿಯ ಇಂಜಿನಿಯರ್ ಎ.ಆರ್. ಮಮತ ಮಾತನಾಡಿ, ಇಂದು ಅವಿಭಕ್ತ ಕುಟುಂಬ ಕಡಿಮೆ ಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಸಹೋದರತ್ವ, ಮಮತೆ ಮಮಕಾರದ ಮಹತ್ವದ ಬಗ್ಗೆ ಮತ್ತು ಸಕರಾತ್ಮಕ ಚಿಂತನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರೆ ಅದೇ ಮಕ್ಕಳು ಮುಂದೆ ಸಮಾಜದಲ್ಲಿ ಮಹಿಳೆಯರನ್ನು ಗೌರವ ಭಾವನೆಯಿಂದ ಕಾಣುತ್ತಾರೆ ಎಂದರು. ಕಾಲೇಜು ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮಾತನಾಡಿ, ಇಂದಿನ ಯುವಕರಲ್ಲಿ ನಿರಾಸಕ್ತಿ ಹೆಚ್ಚಾಗುತ್ತಿದೆ. ಇದರಿಂದ ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳು ಸೇರಿದಂತೆ ಹಲವಾರು ಪಿಡುಗು ಮತ್ತು ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುವದಿಲ್ಲ. ಯುವಕರಲ್ಲಿ ಇಚ್ಚಾಶಕ್ತಿ ಇದ್ದರೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಯುವಕರು ಸಕಾರಾತ್ಮಕ ಚಿಂತನೆಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯ ಎಎಸ್ಐ ಖತೀಜ, ಉಪನ್ಯಾಸಕಿಯರಾದ ಹೆಚ್.ಎಂ. ಅಭಿನಾ, ಶೋಭಾ, ಘಟಕದ ಪದಾಧಿಕಾರಿಗಳಾದ ಡಿ.ಪಿ. ಮೇಘನಾ, ಜೆ.ಆರ್. ಆಶಿತಾ, ಎಸ್.ಎಂ. ಅಶ್ವಿನಿ, ಎಸ್.ಎನ್. ಸುಮಿತಾ ಮುಂತಾದವರಿದ್ದರು.
- ದಿನೇಶ್ ಮಾಲಂಬಿ/ಸುರೇಶ್ ಒಡೆಯನಪುರ