ಮಡಿಕೇರಿ, ಸೆ. 7: ಶತ್ರು ರಾಷ್ಟ್ರವೇ ಇದ್ದಕ್ಕಿದ್ದಂತೆ ಯುದ್ಧ ಸಾರಿತ್ತು. ಇದು ಭಾರತದ ಸೇನಾ ಪಡೆಗೆ ಆಕಸ್ಮಿಕ ಘಟನೆಯಾಗಿತ್ತು. ಈ ಸಂದರ್ಭದಲ್ಲಿ ದೇಶ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಓರ್ವ ಯುವಕ ತೋರಿದ ಅಪ್ರತಿಮ ಸಾಹಸ ಕಲ್ಪನಾತೀತವಾದದ್ದು.., ಆ ಧೀಮಂತ ಯುವಕ ಕೆಚ್ಚೆದೆಯಿಂದ ಹೋರಾಡಿದ ಪರಿಯನ್ನು ಅವರ ಎದುರಾಳಿಗಳೇ ಹೊಗಳಿದ್ದು, ಇತಿಹಾಸ. ತಾನು ಸಾಯುವದು ಖಚಿತ ಎಂಬ ಅರಿವಿದ್ದರೂ ದೇಶಕ್ಕಾಗಿ ಅಪ್ರತಿಮ ಸಾಧನೆ ತೋರಿ ಪ್ರಾಣತ್ಯಾಗ ಮಾಡಿರುವದು ಸರ್ವಶ್ರೇಷ್ಠವಾದದ್ದು, ಶತ್ರುರಾಷ್ಟ್ರದವರಿಂದಲೇ ‘ವಿಂಗ್ಸ್ ಆಫ್ದಿ ಫಯರ್’ ಎನಿಸಿಕೊಂಡ ಈತನ ಸಾಹಸ ಯಶೋಗಾಥೆ ಬೆಳಕಿಗೆ ಬಂದಿದ್ದು ಹಲವಾರು ವರ್ಷಗಳ ಬಳಿಕ. ಹಲವು ವರ್ಷಗಳು ಉರುಳಿದ್ದರೂ ಈ ಸಾಹಸ, ತ್ಯಾಗ ಬಲಿದಾನವನ್ನು ಗುರುತಿಸಿ ದೇಶದ ರಕ್ಷಣಾ ಪಡೆಯಲ್ಲಿ ನೀಡಲಾಗುವ ಉನ್ನತ ಬಿರುದುಗಳಲ್ಲಿ ಒಂದಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ನೀಡಲಾಗಿದೆ. ಆದರೂ ಈ ಸಾಹಸಮಯ ಕಾರ್ಯಾಚರಣೆಗೆ ಅತ್ಯುನ್ನತ ಬಿರುದಾದ ಪರಮವೀರ ಚಕ್ರವೇ ಸಿಗಬೇಕಿತ್ತು ಎಂಬ ಅಭಿಪ್ರಾಯ
(ಮೊದಲ ಪುಟದಿಂದ) ಯೋಧರ ಜಿಲ್ಲೆ ಕೊಡಗಿನ ವೀರ ಸೇನಾನಿಯೊಬ್ಬರ ಕುರಿತಾಗಿ ವ್ಯಕ್ತಗೊಂಡಿತು.
1965ರಲ್ಲಿ ನಡೆದ ಭಾರತ - ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಕೊಡಗಿನ ಬೀರುಗದಲ್ಲಿ ಜನ್ಮ ತಳೆದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ದೇಶಕ್ಕಾಗಿ ಹುತಾತ್ಮರಾದ ಪರಿಯನ್ನು ಇಂದು ಹಲವು ಪ್ರಮುಖರು ಮೆಲುಕು ಹಾಕಿದರಲ್ಲದೆ ಈಗಿನ ಯುವಪೀಳಿಗೆಗೂ ಮನವರಿಕೆ ಮಾಡಿದರು.
ಕೊಡವ ಮಕ್ಕಡ ಕೂಟದಿಂದ ಕಳೆದ ಕೆಲವು ವರ್ಷಗಳಿಂದ ಈ ವೀರ ಸೇನಾನಿಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೆಪ್ಟಂಬರ್ 7ರಂದು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ದೇವಯ್ಯ ವೃತ್ತದಲ್ಲಿ ಆಚರಿಸಲಾಗುತ್ತಿದ್ದು, ಅಜ್ಜಮಾಡ ಕುಟುಂಬಸ್ಥರು ಸಾಥ್ ನೀಡುತ್ತಿದ್ದಾರೆ. ಇದರಂತೆ ಇಂದು ಮಕ್ಕಡಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ವತಿಯಿಂದ ದೇವಯ್ಯ ಅವರ ಪುಣ್ಯಸ್ಮರಣೆ ನಡೆಯಿತು. ದೇವಯ್ಯ ವೃತ್ತದಲ್ಲಿ ಪುಷ್ಪಾರ್ಚನೆಯೊಂದಿಗೆ ನಮನ ಸಲ್ಲಿಸಿದ ಬಳಿಕ ಬಾಲಭವನ ದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ದೇವಯ್ಯ ಅವರ ಯಶೋಗಾಥೆ ಯನ್ನು ಸ್ಮರಿಸಿ ಇವರ ಸಂಸ್ಮರಣೆ ಇತರರಿಗೆ ಪ್ರೇರಣೆಯಾಗ ಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹುತಾತ್ಮರ ಸ್ಮರಣೆ ಅತ್ಯಗತ್ಯ : ಯಂ.ಸಿ.ಎನ್.
ದೇವಯ್ಯ ಅವರ ಚರಿತ್ರೆಯನ್ನು ಮೆಲುಕು ಹಾಕಿ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಅಪ್ರತಿಮ ಸಾಹಸ ತೋರಿದ ದೇವಯ್ಯ ಸ್ಮರಣೆ ಅರ್ಥಪೂರ್ಣ ವಾದದ್ದು. ರಕ್ಷಣಾ ಪಡೆಯ ಸೇವೆಯಲ್ಲಿ ಜಾತಿ ಆಧಾರದ ಪ್ರಶ್ನೆಯೇ ಇಲ್ಲ. ಕೊಡಗಿನ ಯಾವದೇ ವ್ಯಕ್ತಿ ದೇಶಕ್ಕಾಗಿ ಬಲಿದಾನ ಮಾಡಿ ದ್ದರೂ ಅವರನ್ನು ಪ್ರತಿಯೊಬ್ಬರೂ ಗೌರವಿಸಿ ನಮನ ಸಲ್ಲಿಸಬೇಕು. ವರ್ಷಂಪ್ರತಿ ಈ ಕರ್ತವ್ಯ ನಡೆಯಬೇಕಿದೆ ಎಂದ ಅವರು ಬಾಳುಗೋಡುವಿನಲ್ಲಿ ಕೊಡವ ಸಾಂಸ್ಕøತಿಕ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ಇಂತಹ ಯುದ್ಧ ಸ್ಮಾರಕ ನಿರ್ಮಿಸಲಾಗಿದ್ದು, ಇದರಲ್ಲಿ ದೇಶಸೇವೆ ಸಂದರ್ಭ ಹುತಾತ್ಮರಾದ ಎಲ್ಲರ ಮಾಹಿತಿಯನ್ನು ಅಳವಡಿಸ ಲಾಗುತ್ತಿದೆ. ಈ ಮೂಲಕ ವೀರ ಮರಣವನ್ನಪ್ಪಿದವರನ್ನು ಸ್ಮರಿಸುವದರೊಂದಿಗೆ ಮುಂದಿನ ಪೀಳಿಗೆಗೂ ಪ್ರೇರಣೆ ಮೂಡಿಸಬೇಕಿದೆ ಎಂದರು. ಜಿಲ್ಲೆಯ ಎಲ್ಲಾ ಜನಾಂಗದವರು ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಎಲ್ಲಾ ಯೋಧರ ಸ್ಮರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲೆಗೆ ಎರಡು ಮಹಾವೀರ ಚಕ್ರ
ಅತಿಥಿಯಾಗಿದ್ದ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ ಅವರು ಮಾತನಾಡಿ, ಕೊಡಗಿನ ಅದೆಷ್ಟೋ ಯೋಧರು ದೇಶದ ರಕ್ಷಣಾ ಪಡೆಯಲ್ಲಿ ಗುರುತಿಸುವಂತಹ ಸೇವೆ ಮಾಡಿದ್ದಾರೆ. ಈ ತನಕ ಅಜ್ಜಮಾಡ ದೇವಯ್ಯ ಹಾಗೂ ಪುಟ್ಟಿಚಂಡ ಗಣಪತಿ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ಸೇರಿದಂತೆ ಇನ್ನೂ ಹಲವರಿಗೆ ವೀರಚಕ್ರ ಬಿರುದು ದೊರೆತಿದೆ. ಯೋಧರ ಜಿಲ್ಲೆಯೆಂದು ಪರಿಗಣಿತ ವಾಗಿರುವ ಕೊಡಗಿನಿಂದ ಇನ್ನಷ್ಟು ಜನರು ಸೇನಾಪಡೆಗೆ ಸೇರ್ಪಡೆಯಾಗ ಬೇಕು ಎಂದು ಕರೆ ನೀಡಿದರು. ಜನಸಂಖ್ಯೆಯಲ್ಲಿ ವಿರಳವಾಗಿದ್ದರೂ ರಕ್ಷಣಾ ಪಡೆಯಲ್ಲಿ ಕೋಟಿಗಟ್ಟಲೆ ಜನಸಂಖ್ಯೆ ಇರುವ ಗೂರ್ಖಾ ರೆಜಿಮೆಂಟ್, ಸಿಖ್ ರೆಜಿಮೆಂಟ್ ಮಾದರಿಯಲ್ಲಿ ಕೂರ್ಗ್ ರೆಜಿಮೆಂಟ್ ಇರುವದು ಇಲ್ಲಿನ ಸೇನಾ ಪರಂಪರೆಗೆ ಸಾಕ್ಷಿ ಎಂದು ಅವರು ವಿವರಿಸಿದರು.
ದೇವಯ್ಯ ಅವರ ಬಲಿದಾನ ‘ಸುಪ್ರೀಂ ಸ್ಯಾಕ್ರಿಫೈಸ್’ ಎಂದು ಬಣ್ಣಿಸಿದ ನಂಜಪ್ಪ ಜಿಲ್ಲೆಯಿಂದ ಇನ್ನಷ್ಟು ಜನರು ದೇಶಸೇವೆಗೆ ಮುಂದೆ ಬರಲು ಉತ್ತೇಜನ ನೀಡಬೇಕಿದೆ ಎಂದರು. ಶಿಸ್ತಿಗೆ ಹೆಸರಾದ ಜಿಲ್ಲೆಯಲ್ಲಿ ಮಕ್ಕಳು ತಪ್ಪುದಾರಿಗೆ ಇಳಿಯುತ್ತಿದ್ದಾರೆ, ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಡಿಕೇರಿ ನಗರಸಭೆಯ ಅಧ್ಯಕ್ಷೆ ಶ್ರೀಮತಿ ಬಂಗೇರ ಅವರು ನಗರದಲ್ಲಿ ದೇವಯ್ಯ ಪ್ರತಿಮೆ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ (ಜಯ) ಅವರು ಮಾತನಾಡಿ, ವೀರ ಸೇನಾನಿಯ ಪ್ರತಿಮೆ ನಿರ್ಮಾಣ ಅರ್ಥಪೂರ್ಣವಾಗಿದ್ದು, ಸಮಾಜ ದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವದು. ಉತ್ತಮ ಸೇವೆಯನ್ನು ಗುರುತಿಸಬೇಕಲ್ಲದೆ, ಇತರರಿಗೆ ಇದು ಪ್ರೇರಣೆಯಾಗಬೇಕೆಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ದೇವಯ್ಯ ಅವರ ತ್ಯಾಗ - ಬಲಿದಾನಕ್ಕೆ ಈತನಕ ಯಾವ ಮನ್ನಣೆ ಸಿಗಬೇಕಿತ್ತೋ ಅದು ಸಿಕ್ಕಿಲ್ಲ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಫೋರಂ ಹಾಗೂ ಹಿರಿಯ ಸೇನಾಧಿಕಾರಿಗಳು, ಇತರರು ಸಹಕರಿಸಬೇಕೆಂದರು. ದೇವಯ್ಯ ಮೆಮೋರಿಯಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ದೇವಯ್ಯ ಅವರ ಪ್ರತಿಮೆ ನಿರ್ಮಾಣಕ್ಕೆ ಕುಟುಂಬ ಎಲ್ಲರ ಸಹಕಾರ ಕೋರುತ್ತದೆ. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟದ ಪ್ರಯತ್ನವನ್ನೂ ಸ್ಮರಿಸಿಕೊಳ್ಳುವದಾಗಿ ಹೇಳಿದರು.
ವಾಯುಪಡೆಯ ನಿವೃತ್ತ ಯೋಧ ಚೆಟ್ರುಮಾಡ ಕಾಶಿ ಅವರು ದೇವಯ್ಯ ಅವರ ಸಂಸ್ಮರಣೆಗೆ ನಡೆಸಿದ ಪ್ರಯತ್ನದ ಕುರಿತು ಪ್ರಸ್ತಾಪಿಸಿ ಅವರ ತ್ಯಾಗ- ಬಲಿದಾನ ಸರ್ವಶ್ರೇಷ್ಠ ಎಂದರು. ಮಡಿಕೇರಿ ಡಿವೈಎಸ್ಪಿ ಚಬ್ಬಿ ಅವರು ದೇವಯ್ಯ ಅವರ ಸಾಹಸವನ್ನು ಉಲ್ಲೇಖಿಸಿ ಕೊಡಗಿನಿಂದ ಇನ್ನಷ್ಟು ಜನರು ದೇಶ ಸೇವೆಗೆ ಮುಂದೆ ಬರಲಿ ಎಂದು ಆಶಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೇದಿಕೆಯಲ್ಲಿ ಕೊಡವ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಅಜ್ಜಮಾಡ ಶಂಕರು ನಾಚಪ್ಪ ಉಪಸ್ಥಿತರಿದ್ದರು. ದೇವಯ್ಯ ವೃತ್ತದಲ್ಲಿ ನಮನ ಸಲ್ಲಿಸಿದ ಸಂದರ್ಭ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಪಾಲ್ಗೊಂಡಿದ್ದರು.ಬೊಳ್ಳಜೀರ ಯಮುನ ಪ್ರಾರ್ಥಿಸಿ, ಬಾಳೆಯಡ ದಿವ್ಯ ನಿರೂಪಿಸಿದರು. ಮಕ್ಕಡ ಕೂಟದ ಪದಾಧಿಕಾರಿಗಳಾದ ಬಾಳೆಯಡ ಪ್ರತೀಶ್ ಪೂವಯ್ಯ, ಪುತ್ತರಿರ ಕರುಣ್ ಕಾಳಯ್ಯ ಮತ್ತಿತರರು ಹಾಜರಿದ್ದರು.