ಮಡಿಕೇರಿ, ಡಿ. 17: ನಗರದ ಕಾನ್ವೆಂಟ್ ರಸ್ತೆಯನ್ನು ದುರಸ್ತಿ ಗೊಳಿಸಬೇಕು, ಮಹದೇವಪೇಟೆ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ತನಿಖೆಯಾಗಬೇಕು ಮತ್ತು ಜಲಮೂಲಗಳ ಹೂಳೆತ್ತುವ ಮೂಲಕ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಪೀಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ, ಸಮಸ್ಯೆಗಳ ಪರಿಹಾರಕ್ಕೆ 15 ದಿನಗಳ ಗಡುವು ನೀಡಿದರು. ಸೂಕ್ತ ರೀತಿಯಲ್ಲಿ ನಗರಸಭೆ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಕಾನ್ವೆಂಟ್ ಸಮೀಪ ರಸ್ತೆ ತಡೆ ಪ್ರತಿಭಟನೆ ಹಾಗೂ ಈ ಭಾಗದ ನಗರಸಭಾ ಸದಸ್ಯರ ಮನೆ ಎದುರು ಸಾರ್ವಜನಿಕರ ಬೆಂಬಲದೊಂದಿಗೆ ಧರಣಿ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಕೆಲವು ನಗರಸಭಾ ಸದಸ್ಯರುಗಳಿಗೆ ನಗರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲದಾಗಿದೆ ಎಂದು ಟೀಕಿಸಿದರು. ಹಲವಾರು ವರ್ಷಗಳಿಂದ ಹದಗೆಟ್ಟಿದ್ದ ಮುತ್ತಪ್ಪ ದೇವಾಲಯದಿಂದ ಕಾನ್ವೆಂಟ್‍ವರೆಗಿನ ರಸ್ತೆ ಹಾಗೂ ಕಾನ್ವೆಂಟ್‍ನಿಂದ ಕಾನ್ವೆಂಟ್ ಜಂಕ್ಷನ್‍ವರೆಗಿನ ರಸ್ತೆಯನ್ನು ಒಳಚರಂಡಿಗಾಗಿ ಅಗೆದು ಹಾಕಿ ಕುಲಗೆಡಿಸಲಾಗಿದೆ. ಒಳಚರಂಡಿ ಕಾಮಗಾರಿ ಪ್ರಗತಿಯ ಬೆಳವಣಿಗೆ ಯಾಗಿದ್ದರೂ ಹದಗೆಟ್ಟ ರಸ್ತೆಯನ್ನು ಸರಿಪಡಿಸುವ ಯೋಚನೆ ಅಥವಾ ಯೋಜನೆ ಇಲ್ಲದಂತಾಗಿದೆ. ದ್ವಿಚಕ್ರ ವಾಹನ ಚಾಲಕರು, ಪಾದಚಾರಿಗಳು, ವಿದ್ಯಾರ್ಥಿಗಳು ಹದಗೆಟ್ಟ ರಸ್ತೆಯಲ್ಲಿ ಓಡಾಡಲಾಗದೆ ಬಿದ್ದು ಆಸ್ಪತ್ರೆ ಸೇರಿರುವ ಘಟನೆಗಳೂ ನಡೆದಿದೆ.
ಕಾನ್ವೆಂಟ್‍ಗೆ ಮಕ್ಕಳನ್ನು ಕರೆ ತರುವ ಆಟೋಚಾಲಕರಂತೂ ಎಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದು ಕೊಂಡು ಡ್ರೈವಿಂಗ್ ಮಾಡಬೇಕಾಗಿದೆ. ಸ್ಥಳೀಯ ನಗರಸಭಾ ಸದಸ್ಯರು ಸಿಮೆಂಟ್ ರಸ್ತೆ ಮಂಜೂರಾಗಿದೆ ಎಂದು ಪೊಳ್ಳು ಭರವಸೆ ನೀಡುತ್ತಾ ದಿನ ಕಳೆಯುತ್ತಿದ್ದಾರೆಯೇ ಹೊರತು ಸ್ಥಳೀಯರ ಯಾವದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರು ಮನೆ ಕಂದಾಯ, ನೀರಿನ ಕಂದಾಯ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವ ನಗರಸಭೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು ಎನ್ನುವ ಅರಿವಿಲ್ಲ. ಇತ್ತೀಚೆಗೆ ನಡೆದ ಮಹದೇವಪೇಟೆ ರಸ್ತೆ ಕಾಮಗಾರಿ ಯನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರಿಯಾಗಿ ಪರಿಶೀಲನೆ ಮಾಡಿಲ್ಲ. ಕಳಪೆ ಗುಣಮಟ್ಟದ ಈ ರಸ್ತೆ ಒಂದೇ ತಿಂಗಳಿನಲ್ಲಿ ಹದಗೆಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಗಳನ್ನು ಮೊದಲು ಅಮಾನತು ಮಾಡಬೇಕು. ನಗರಸಭೆಯಲ್ಲಿ ಅಧಿಕಾರಿಗಳಾಗಿ 3 ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿ ರುವವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ದೂರು ನೀಡಲಾಗುವದು. ಅಲ್ಲದೆ ಗುಣಮಟ್ಟ ಪರಿಶೀಲನೆಗಾಗಿ ಎಸಿಬಿಗೂ ಮನವಿ ಮಾಡಲಾಗುವದೆಂದು ಹೇಳಿದರು.
ಈ ವರ್ಷ ಮಳೆಯ ಅಭಾವದಿಂದ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆಗಳಿದೆ. ಆದ್ದರಿಂದ ಸಂಪಿಗೆಕಟ್ಟೆ ಬಳಿ ಅರಣ್ಯ ವ್ಯಾಪ್ತಿಯಲ್ಲಿರುವ ಕೆರೆಯನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ನಗರಸಭೆ ಮುಂದಾಗಬೇಕು. ಈ ಕೆರೆ ಮಾತ್ರವಲ್ಲದೆ ನಗರದಲ್ಲಿರುವ ಎಲ್ಲಾ ಜಲಮೂಲಗಳ ಹೂಳೆತ್ತಬೇಕೆಂದು ಹರೀಶ್ ಜಿ. ಆಚಾರ್ಯ ಒತ್ತಾಯಿಸಿದರು.
ಪ್ರಮುಖರಾದ ಕೊರಗಪ್ಪ ರೈ ಮಾತನಾಡಿ, ಕುಡಿಯುವ ನೀರು ರಸ್ತೆ ಪಾಲಾಗುತ್ತಿದ್ದು, ಹಳ್ಳಬಿದ್ದ ರಸ್ತೆಯಲ್ಲಿ ನಿಲ್ಲುವ ನೀರು ಶಾಲಾ ವಿದ್ಯಾರ್ಥಿಗಳ ಓಡಾಟಕ್ಕೆ ಅಡಚಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವಚ್ಛತೆ ಕುರಿತು ಕರಪತ್ರ ಹಂಚುವ ನಗರಸಭೆ ಕನಿಷ್ಟ ಚರಂಡಿಗಳನ್ನು ಕೂಡ ಶುಚಿಗೊಳಿಸುತ್ತಿಲ್ಲವೆಂದು ಟೀಕಿಸಿದರು.
ಗೋಷ್ಠಿಯಲ್ಲಿ ಬಿ.ಟಿ. ಸುಂದರ, ಗಣೇಶ್ ರೈ, ಹಕೀಂ ಹಾಗೂ ಸುರೇಶ್ ಉಪಸ್ಥಿತರಿದ್ದರು.