ಶನಿವಾರಸಂತೆ, ಜು. 30: ಪಟ್ಟಣದಲ್ಲಿ ಮಹದಾಯಿ ನ್ಯಾಯ ಮಂಡಳಿ ಮಧ್ಯಂತರ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಸ್ಪಂದಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕು ಮತ್ತು ಹೋಬಳಿ ಘಟಕಗಳು ಶನಿವಾರಸಂತೆಯಲ್ಲಿ ಶನಿವಾರ ಪ್ರತಿಭಟನಾ ಮೌನ ಮೆರವಣಿಗೆ ಹಾಗೂ ಮಾನವ ಸರಪಳಿ ರಚಿಸಿ ಬೆಂಬಲ ಸೂಚಿಸಿದವು.
ಬೆಳಿಗ್ಗೆ 11 ಗಂಟೆಗೆ ಗುಡುಗಳಲೆ ವೃತ್ತದಿಂದ ಆರಂಭವಾದ ಮೌನ ಮೆರವಣಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೇರಿ ಮಾನವ ಸರಪಳಿ ರಚಿಸಿದರು.
ಬಳಿಕ ನಡೆದ ಸಭೆಯಲ್ಲಿ ಜಿಲ್ಲಾ ಕರವೇ ಅಧ್ಯಕ್ಷ ಪಿ.ಕೆ. ಜಗದೀಶ್ ಮಾತನಾಡಿ, ಮಹದಾಯಿ ಯೋಜನೆಗೆ 5 ಜಿಲ್ಲೆಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದು ಕೇವಲ 5 ಜಿಲ್ಲೆಗಳ ಸಮಸ್ಯೆಯಲ್ಲ. ಅಖಂಡ ಕರ್ನಾಟಕ ರಾಜ್ಯದ ಸಮಸ್ಯೆಯಾಗಿದೆ. ರಾಜ್ಯದ 21 ಸಂಸದರು, ಮಂತ್ರಿಗಳು, ಶಾಸಕರು ರಾಜೀನಾಮೆ ನೀಡಿ ರೈತಪರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಹೇಳಿದರು.
ಕುಶಾಲನಗರದ ನಗರ ಘಟಕದ ಕಾರ್ಯದರ್ಶಿ ಮಣಿಕಂಠ ಮಾತನಾಡಿ ಮಹದಾಯಿ ಯೋಜನೆಯನ್ನು ಉಳಿಸಿಕೊಳ್ಳಲೇ ಬೇಕು. ರೈತಪರ ಕಾಳಜಿಯುಳ್ಳ ಮನಸ್ಸುಗಳು ಹೋರಾಟಕ್ಕೆ ಕೈ ಜೋಡಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮಾಡಲೇಬೇಕು ಎಂದರು.
ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ್, ಸಂಚಾಲಕ ರಾಜಣ್ಣ, ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಆನಂದ್, ನಗರ ಘಟಕದ ಅಧ್ಯಕ್ಷ ಧನುಕುಮಾರ್ ಮಾತನಾಡಿದರು.
ನೇತೃತ್ವವನ್ನು ಕರವೇ ವಿವಿಧ ಘಟಕಗಳ ಪ್ರಮುಖರಾದ ಶೀಲಾ, ರಾಕೇಶ್, ಹರೀಶ್, ಪ್ರವೀಣ್, ಶರತ್, ಜೈಸನ್, ಸ್ವಾಮಿ ಮತ್ತಿತರರು ವಹಿಸಿದ್ದರು. ಪಿಎಸ್‍ಐ ಮರಿಸ್ವಾಮಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.