ಮಡಿಕೇರಿ, ಜು. 27: ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿ ಇಡೀ ಜಿಲ್ಲೆಗೆ ಏಕೈಕ ನಗರಸಭೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲವೇ ಆಗಲಿ ಸುಡುಬಿಸಿಲೇ ಆಗಲಿ ಮಡಿಕೇರಿಗೆ ಸಾವಿರಾರು ಸಂಖ್ಯೆಯ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಪ್ರವಾಸಿಗರ ಭರಾಟೆ ಕೇವಲ ವಾರಾಂತ್ಯಗಳಲ್ಲಿ ಮಾತ್ರವಲ್ಲ ಇದೀಗ ದಿನಂಪ್ರತಿ ಕಂಡು ಬರುತ್ತಿದೆ. ಪ್ರವಾಸಿಗರ ಒತ್ತಡ ಒಂದೆಡೆಯಾದರೆ ಜಿಲ್ಲೆಯ ಜನತೆ ತಮ್ಮ ಬಹುತೇಕ ಅಗತ್ಯ ಕೆಲಸ ಕಾರ್ಯಗಳಿಗಾಗಿ ಜಿಲ್ಲಾಮಟ್ಟದ ಕಚೇರಿಗಳನ್ನು ಹೊಂದಿರುವ ಜಿಲ್ಲಾ ಕೇಂದ್ರಕ್ಕೆ ಆಗಮಿಸಲೇಬೇಕಾಗುತ್ತದೆ. ಇದರಿಂದ ಸಹಜವಾಗಿ ಜಿಲ್ಲಾ ಕೇಂದ್ರ ಮಡಿಕೇರಿ ದಿನನಿತ್ಯ ಬಿರುಸಿನ ಚಟುವಟಿಕೆಯಿಂದ ಕೂಡಿರುತ್ತದೆ.
ಇದು ಹಾಗಿರಲಿ ಈ ಪರಿಸ್ಥಿತಿಗೆ ತಕ್ಕ ಮೂಲಭೂತ ವ್ಯವಸ್ಥೆಗಳು ಕಲ್ಪಿತವಾಗುತ್ತಿವೆಯೇ ಎಂಬದು ಇಲ್ಲಿನ ಪ್ರಶ್ನೆ. ಏಕೈಕ ನಗರಸಭೆಯಾಗಿದ್ದು, ನಗರಸಭೆಗೆ ನಿಗದಿತ ಅನುದಾನವಿರುತ್ತದೆ. ಇದಲ್ಲದೆ ಕೆಲವು ವಿಶೇಷ ಯೋಜನೆಗಳೂ ಲಭ್ಯವಾಗುತ್ತವೆ. ಆದರೆ ಇದರ ಅನುಷ್ಠಾನದಲ್ಲಿ ಕಂಡುಬರುತ್ತಿರುವದು ಇಚ್ಛಾಶಕ್ತಿಯ ಕೊರತೆ.
ಮಳೆಗಾಲದ ಮಡಿಕೇರಿ ಎಂದರೆ ಇಲ್ಲಿನ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಆದರೆ ಈ ಬಾರಿಯ ಮಳೆಗಾಲವೂ ವಿಭಿನ್ನವಾಗಿದೆ. ಮುಂಗಾರು ಆರಂಭಗೊಂಡ ಸಂದರ್ಭ ಐದಾರು ದಿನಗಳು ಮಾತ್ರ ಬಿರುಸಿನ ಮಳೆಯಾಗಿದ್ದು, ನಂತರದ ದಿನಗಳಲ್ಲಿ ಮಳೆಯೇ ಕ್ಷೀಣಗೊಂಡಂತಾಗಿದೆ. ಆಟಿ (ಕಕ್ಕಡ) ತಿಂಗಳಿನಲ್ಲಿ ಬೇಸಿಗೆಯ ರೀತಿಯಲ್ಲಿ ಬಿಸಿಲು ಕಾಯುತ್ತಿರುವ ಚಿತ್ರಣದ ಬಗ್ಗೆ ಹಿರಿಯರು, ಅನುಭವಸ್ಥರು ಅಚ್ಚರಿ ವ್ಯಕ್ತಪಡಿಸುವಂತಾಗಿದೆ.
ಮಳೆಗಾಲ ಈ ರೀತಿ ಇದ್ದರೂ ನಗರಸಭೆಯ ಕಾರ್ಯವೈಖರಿ ಮಾತ್ರ ನಿರಾಸೆಯುಂಟು ಮಾಡಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬರುತ್ತಿದೆ. ಬಹುತೇಕ ಕಾಮಗಾರಿಗಳು ಅರ್ಧದಲ್ಲೇ ಉಳಿದಿದ್ದರೆ, ಕೆಲವು ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ನಗರದ ಜನತೆ ಎದುರಿಸುತ್ತಿರುವದು ರಸ್ತೆಗಳ ಸಮಸ್ಯೆ. ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಬಿದ್ದಿದ್ದು, ಭಾರೀ ಗಾತ್ರದ ಗುಂಡಿಗಳು ಅಪಾಯಕ್ಕೆ ಕಾದಿರುವಂತಿದೆ. ‘ಶಕ್ತಿ’ ನಗರದ ಕೆಲವು ಪ್ರಮುಖ ಪ್ರದೇಶಗಳ ಸಮೀಕ್ಷೆ ನಡೆಸಿದ ಸಂದರ್ಭ ಹಲವಷ್ಟು ಸಮಸ್ಯೆಗಳು ಕಂಡು ಬಂದಿದೆ. ಒಂದು ರೀತಿಯಲ್ಲಿ ಇವು ಸರಿಪಡಿಸಲಾಗದ ಸಮಸ್ಯೆಗಳೇ ಅಲ್ಲ. ಕೇವಲ ಸೂಕ್ತ ನಿರ್ವಹಣೆ ಮಾಡಿದಲ್ಲಿಯೂ ಹಲವು ಸಮಸ್ಯೆಗಳು ನಿವಾರಣೆಯಾಗುತ್ತಿದೆ. ಆದರೆ ಈ ಬಗ್ಗೆ ನಗರಸಭೆಯಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಆಸಕ್ತಿ ತೋರದಿರುವದು ನಗರದ ಜನತೆಯ ದೌರ್ಭಾಗ್ಯವೆನಿಸಿದೆ.
ನಗರಸಭೆ ಕಚೇರಿಯ ಎದುರೇ ಇರುವ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಸುತ್ತ ಡಾಂಬರು ಕಿತ್ತು ಬಂದಿದ್ದು, ಗುಂಡಿಗಳಲ್ಲಿ ನೀರು ತುಂಬಿರುವ ಸಮಸ್ಯೆಯನ್ನು ದಿನಂಪ್ರತಿ ಎಲ್ಲರೂ ಗಮನಿಸುತ್ತಿದ್ದಾರೆ. ಮಳೆಗಾಲ ಆರಂಭದಿಂದಲೇ ಉಂಟಾಗಿರುವ ಸಮಸ್ಯೆ ಇಂದಿಗೂ ಹಾಗೆಯೇ ಉಳಿದಿದೆ. ಹೇಳಿ- ಕೇಳಿ ಇದು ನಗರ ಪ್ರವೇಶಿಸಿದೊಡನೆ ಹೃದಯ ಭಾಗದಲ್ಲೇ ಕಂಡುಬರುವ ದೃಶ್ಯ. ಇನ್ನು ಖಾಸಗಿ ಬಸ್ನಿಲ್ದಾಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ರಸ್ತೆಯಲ್ಲಿ ನಡು ನಡುವೆ ಕಾಂಕ್ರೀಟ್ ಕಿತ್ತು ಬಂದಿದ್ದು, ಅಳವಡಿಸಿರುವ ರಾಡ್ಗಳು ಮೇಲೆ ಬಂದಿದ್ದು, ಮೊನಚಾದ ರಾಡ್ಗಳಿಂದ ಹಲವರ ವಾಹನ ‘ಪಂಚರ್’ ಆಗಿರುವ ನಿದರ್ಶನಗಳೂ ಇವೆ. ಸಮಾರಂಭದ ಸಂದರ್ಭ ಸಾಕಷ್ಟು ವಾಹನ ಹಾಗೂ ಜನಜಂಗುಳಿ ಇರುವ ಕಾವೇರಿ ಹಾಲ್ನ ಸನಿಹದಲ್ಲಿ ಭಾರೀ ಗಾತ್ರದ ಮ್ಯಾನ್ಹೋಲ್ ಒಂದು ರಾಡ್ಗಳ ಸಹಿತ ಬಾಯ್ದೆರೆದಿರುವದು ಕೆಲವು ತಿಂಗಳಿನಿಂದ ಹಾಗೆಯೇ ಉಳಿದಿದೆ. ದಾನಿಯೊಬ್ಬರು (ದಿ. ಸಿ.ವಿ. ಶಂಕರ್) ವಾಹನದಟ್ಟಣೆ ತಪ್ಪಿಸಲು ಸಂಪರ್ಕ ರಸ್ತೆ ನಿರ್ಮಿಸಲು ಜಾಗ ನೀಡಿದ್ದಾರೆ. ಕಾವೇರಿ ಹಾಲ್ ಮುಂಭಾಗದಿಂದ ಮಾರುಕಟ್ಟೆಗೆ ತೆರಳುವ ಈ ರಸ್ತೆಯಲ್ಲೂ ಗುಂಡಿಯೊಂದು ಅಪಾಯಕ್ಕೆ ಕಾದಿದೆ. ಇನ್ನು ಮಹದೇವಪೇಟೆ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವದರಿಂದ ವಾಹನ ದಟ್ಟಣೆಯಿಂದಾಗಿ ನಗರದ ಮುಖ್ಯರಸ್ತೆ ಮಾತ್ರವಲ್ಲದೆ ಒಳಭಾಗದಲ್ಲೂ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ.
ಪ್ರವಾಸಿ ತಾಣ ಅಬ್ಬಿಫಾಲ್ಸ್ಗೆ ಇದೀಗ ಕೋದಂಡರಾಮ ದೇವಾಲಯ, ಮುತ್ತಪ್ಪ ದೇವಾಲಯ ರಸ್ತೆಯ ಮೂಲಕವೇ ತೆರಳಬೇಕಾಗಿದೆ. ಈ ರಸ್ತೆಯ ಸ್ಥಿತಿಯಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ. ದಿನವೊಂದಕ್ಕೆ ಸುಮಾರು ಸಾವಿರದಷ್ಟು ವಾಹನಗಳ ಓಡಾಟ ಈ ರಸ್ತೆಯಲ್ಲಿ ನಡೆಯುತ್ತಿದೆ. ಈ ಮಾರ್ಗದುದ್ದಕ್ಕೂ ಭಾರೀ ಗಾತ್ರದ ಗುಂಡಿಗಳು ಉಂಟಾಗಿದ್ದು, ರಸ್ತೆ ಬದಿ ಇನ್ನಷ್ಟು ಅಪಾಯಕಾರಿಯಾಗಿದೆ.
ಕೆಳಗಿನ ಕೊಡವ ಸಮಾಜದ ಗೇಟ್ನಿಂದ ಓಂಕಾರೇಶ್ವರ ದೇವಸ್ಥಾನಕ್ಕೆ ಇಳಿಯುವ ರಸ್ತೆಯಲ್ಲೂ ಭಾರೀ ಗುಂಡಿಯೊಂದು ಉಂಟಾಗಿದ್ದು, ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಿದ್ದರೆ ಹಲವಾರು ಮಂದಿ ಈ ಒಳ ರಸ್ತೆಯ ಮೂಲಕ ತೆರಳುತ್ತಿದ್ದರು. ಈ ಗುಂಡಿಯಿಂದ ವಾಹನದ ಕೆಳಭಾಗ ರಸ್ತೆಗೆ ತಾಗುವದರಿಂದ ಬಹುತೇಕರು ಈ ರಸ್ತೆಯನ್ನು ತಿರುಗಿಯೂ ನೋಡುತ್ತಿಲ್ಲ. ಕೊಹಿನೂರು ರಸ್ತೆಯಿಂದ ಕಂಚಿಕಾಮಾಕ್ಷಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲೂ ಭಾರೀ ಗುಂಡಿಯೊಂದು ನಿರ್ಮಾಣವಾಗಿ ಹಲವು ಸಮಯ ಕಳೆದಿದೆ. ಮಳೆ ಬಂದರೆ ಈ ಜಾಗದಲ್ಲಿ ದೊಡ್ಡ ಕೆರೆಯ ಮಾದರಿಯಲ್ಲಿ ನೀರು ನಿಂತು ಜನರು ನಡೆದಾಡಲೂ ಪರದಾಡಬೇಕಾಗಿದೆ.
ಇವು ಕೇವಲ ನಾಲ್ಕೈದು ಕಡೆಗಳ ಚಿತ್ರಣವಷ್ಟೆ ಇಂತಹ ನೂರಾರು ಸಮಸ್ಯೆಗಳು ನಗರದ ಒಡಲಲ್ಲಿವೆ. ತೀರಾ ಸಮಸ್ಯೆ ಎನಿಸದ ಕನಿಷ್ಟ ಕೆಲಸಗಳನ್ನು ಆಡಳಿತ ಯಂತ್ರ ಸಮರ್ಥವಾಗಿ ನಿಭಾಯಿಸದಿರುವದರಿಂದ ಸಣ್ಣಪುಟ್ಟ ಸಮಸ್ಯೆಗಳು ಇಲ್ಲಿ ಬೆಟ್ಟದಷ್ಟಾಗಿ ಉಳಿದಿದೆ. ಈ ಬಗ್ಗೆ ಗಮನ ಹರಿಸುವವರಾರು ಎಂಬದು ನಗರವಾಸಿಗಳ ಪ್ರಶ್ನೆ.