ಸೋಮವಾರಪೇಟೆ, ಆ. 4: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಬಸವೇಶ್ವರ ರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಕಮ್ಮನ ಬಂಗಲೆಯ ತಡೆಗೋಡೆ ಕುಸಿದಿದೆ.

ನಿನ್ನೆ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಶೀತಗೊಂಡಿದ್ದ ತಡೆಗೋಡೆ ಕುಸಿದು ಬಿದ್ದಿದ್ದು, ಇಂದು ತೆರವುಗೊಳಿಸಲಾಯಿತು. ಮಳೆಗೆ ಚೌಡ್ಲು ಗ್ರಾಮದ ಪದ್ದಕ್ಕ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ರೂ. 20 ಸಾವಿರ ನಷ್ಟ, ಬಜೆಗುಂಡಿ ಗ್ರಾಮದ ಜೋಸೆಫ್ ಎಂಬವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ರೂ. 40 ಸಾವಿರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ಹೋಬಳಿಗೆ 26.08 ಮಿ.ಮೀ., ಕೊಡ್ಲಿಪೇಟೆಗೆ 18.04, ಶನಿವಾರಸಂತೆಗೆ 16 ಮಿ.ಮೀ., ಶಾಂತಳ್ಳಿಗೆ 52.04, ಕುಶಾಲನಗರಕ್ಕೆ 1.06, ಸುಂಟಿಕೊಪ್ಪಕ್ಕೆ 8 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.