ಮಡಿಕೇರಿ, ಸೆ. 15: ಆಗಾಗ್ಗೆ ಸುರಿಯುವ ಮಳೆಯ ನಡುವೆ ಮೈದಾನದಲ್ಲಿ ಪಾದ ಮುಳುಗುವಷ್ಟು ನಿಂತಿರುವ ನೀರು - ಕೆಸರಿನಲ್ಲಿಯೇ ಕ್ರೀಡಾಪಟುಗಳು ಮಿಂದೆದ್ದು, ತಮ್ಮ ಸಾಮಥ್ರ್ಯ ತೋರಿದರು. ಮಳೆರಾಯನ ಅವಕೃಪೆಯೊಂದಿಗೆ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ನಡೆಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೇಲಾಟಗಳು, ವಾಲಿಬಾಲ್, ಥ್ರೋಬಾಲ್, ಫುಟ್‍ಬಾಲ್ ಪಂದ್ಯಾವಳಿಗಳು ನಡೆದವು. ತಾಲೂಕು ಮಟ್ಟದಲ್ಲಿ ವಿಜೇತರಾದವರು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ವಿಜೇತರಾಗುವವರು ಮೈಸೂರಿನಲ್ಲಿ ಜರುಗುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಪ್ರವೇಶಾತಿ ಪಡೆಯಲಿದ್ದಾರೆ.ಪರ್ಜನ್ಯವೃಷ್ಟಿ ಯಜ್ಞದ ಫಲವಾಗಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯಿಡೀ ಮಳೆಯಾಗಿದ್ದು, ಇಂದು ಬೆಳಿಗ್ಗೆ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ಕ್ರೀಡಾಂಗಣ ಸಂಪೂರ್ಣ ನೀರಿನಿಂದಾವೃತವಾಗಿತ್ತು. ಅಲ್ಲಲ್ಲಿ ಕೆಸರು ಕೂಡ ತುಂಬಿಕೊಂಡಿತ್ತು. ಆದರೂ ಧೃತಿಗೆಡದ ಕ್ರೀಡಾಪಟುಗಳು ಮಳೆ - ನೀರು - ಕೆಸರನ್ನು ಲೆಕ್ಕಿಸದೆ ಆಟೋಟಗಳಲ್ಲಿ ಪಾಲ್ಗೊಂಡು ಗುರಿ ಸಾಧಿಸಿದರು. ಮಳೆಯಲ್ಲಿ ನೆನೆಯುತ್ತ, ಬೀಳುತ್ತಾ, ಏಳುತ್ತಾ ಕ್ರೀಡಾಸ್ಫೂರ್ತಿ ಮೆರೆದರು. ಹಾಕಿ ಪಂದ್ಯಾವಳಿಯು ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್ ಮೈದಾನದಲ್ಲಿ ನಡೆಯಿತು.

ಉದ್ಘಾಟನೆ

ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಯಾಲದಾಳು ಪದ್ಮಾವತಿ ಹಾಗೂ ಕಲಾವತಿ ಪೂವಪ್ಪ ಅವರುಗಳು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ಮರಿರಾಜ್ ಮಾತನಾಡಿ, ರಾಷ್ಟ್ರದಲ್ಲಿ ಸಾಕಷ್ಟು ಯುವ ಸಂಪತ್ತುಗಳಿವೆ. ಅವುಗಳ ಸದ್ಭಳಕೆಯಾಗಬೇಕು. ಈ ಬಾರಿ ಒಲಂಪಿಕ್ಸ್‍ನಲ್ಲಿ ನಿರೀಕ್ಷಿಸಿದಷ್ಟು ಪ್ರತಿಫಲ ಸಿಕ್ಕಿಲ್ಲ. ಮುಂದೆ ಸಿಗಬಹುದೆಂಬ ಭರವಸೆಯಿಡೋಣ ಎಂದರು. ಈ ಸಂದರ್ಭ ಯುವ ಸಬಲೀರಕಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ಮೈಸೂರು ಸಂತ ಜೋಸೆಫರ ಆಸ್ಪತ್ರೆಯ ವೈದ್ಯ ಡಾ. ಗಿರಿಶ್‍ಚಂದ್ರ, ವ್ಯವಸ್ಥಾಪಕಿ ರಜನಿ, ಇನ್ನಿತರರಿದ್ದರು.