ಸೋಮವಾರಪೇಟೆ,ಅ.21: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿಯೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.ಶನಿವಾರಸಂತೆ ಸಮೀಪದ ಬೆಂಬಳೂರು ನಿವಾಸಿ, ಕೃಷಿಕ ಗೋವಿಂದ ಮತ್ತು ಸುಜಾತ ದಂಪತಿಗಳ ಏಕಮಾತ್ರ ಪುತ್ರ, ಶನಿವಾರಸಂತೆ ಭಾರತೀ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿ ಸನ್ಮಿತ್ರ (19) ಎಂಬ ವಿದ್ಯಾರ್ಥಿಯೇ ದುರ್ದೈವವಶಾತ್ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದವನಾಗಿದ್ದು, ಕುಟುಂಬ ವರ್ಗದ ರೋಧನ ಮುಗಿಲು ಮುಟ್ಟಿದೆ.
ನಂತರ ಜಲಪಾತದ ಕೆಳಭಾಗಕ್ಕೆ ತೆರಳಿದ ಸ್ನೇಹಿತರು ತಮ್ಮೊಂದಿಗೆ ತಂದಿದ್ದ ಉಪಾಹಾರವನ್ನು ಸೇವಿಸಿದ್ದಾರೆ. ನಂತರ ಕೈ ತೊಳೆಯಲೆಂದು ಸನ್ಮಿತ್ರ ನೀರಿಗಿಳಿದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಪ್ರಪಾತಕ್ಕೆ ಎಳೆಯಲ್ಪಟ್ಟಿದ್ದಾನೆ.
ಕಣ್ಣೆದುರೇ ಗೆಳೆಯ ನೀರು ಪಾಲಾಗುತ್ತಿದ್ದುದನ್ನು ಕಂಡ ಸ್ನೇಹಿತರು ಹಾಗೂ ಇತರ ಪ್ರವಾಸಿಗರು ಆತನ ರಕ್ಷಣೆಗೆ ಮುಂದಾದರೂ ಪ್ರಯತ್ನ ಫಲ ಕೊಡಲಿಲ್ಲ. ಪರಿಣಾಮ ಸನ್ಮಿತ್ರ ನೀರಿನ ಸೆಳತಕ್ಕೆ ಸಿಲುಕಿ ಕಣ್ಮರೆಯಾಗಿದ್ದಾನೆ.
ತಕ್ಷಣ ಕೆಲವರು ಜಲಪಾತದಿಂದ ಮೇಲೆ ಬಂದು ಅಲ್ಲಿನ ಅಂಗಡಿಗಳ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಜಲಪಾತದ ತಳಭಾಗದಲ್ಲಿ ನೀರಿನ ಹರಿವು ಅಧಿಕವಾಗಿದ್ದು, ಅಲ್ಲಲ್ಲಿ ಕಂದಕಗಳು ನಿರ್ಮಾಣವಾಗಿರುವದರಿಂದ ಮೃತದೇಹ ಅದರೊಳಗೆ ಸಿಲುಕಿತ್ತು. ನಂತರ ಸೋಮವಾರಪೇಟೆ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಹಸನಬ್ಬ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಹೆಚ್.ಓ. ಪ್ರಕಾಶ್, ಮೋಟಾರ್ ಯೂನಿಯನ್ ಸದಸ್ಯ ಮೂರ್ತಿ ಅವರುಗಳು ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದೊಂದಿಗೆ ಸಂಜೆ ವೇಳೆಗೆ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಮೃತದೇಹವನ್ನು ಸೋಮವಾರಪೇಟೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ಸನ್ಮಿತ್ರ ಪೋಷಕರು ಸೇರಿದಂತೆ ಈರ್ವರು ಸಹೋದರಿಯರನ್ನು ಅಗಲಿದ್ದಾನೆ.
ಕ್ರಮ ಕೈಗೊಳ್ಳಲು ಆಗ್ರಹ: ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದ ಬಳಿ ಗ್ರಾಮ ಪಂಚಾಯಿತಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಲಪಾತದ ತಳ ಭಾಗದಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಬ್ಯಾರಿಕೇಡ್, ಎಚ್ಚರಿಕೆಯ ಫಲಕಗಳನ್ನು ಅಳವಡಿಸಲು ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕಿದೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರು ‘ಶಕ್ತಿ’ಯ ಮೂಲಕ ಪಂಚಾಯಿತಿಯನ್ನು ಆಗ್ರಹಿಸಿದ್ದಾರೆ.