ಸೋಮವಾರಪೇಟೆ, ಜು. 16: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸುತ್ತಿರುವ ಪ್ರವಾಸಿಗರ ವಾಹನಗಳ ನಿಲುಗಡೆಗೆ ಜಾಗದ ಸಮಸ್ಯೆ ಎದುರಾಗಿದೆ. ಸೂಕ್ತ ಸೂಚನಾ ಫಲಕ, ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವದರಿಂದ ಅನ್ಯ ವಾಹನಗಳ ಓಡಾಟಕ್ಕೆ ಅನಾನುಕೂಲ ಎದುರಾಗಿದೆ.
ಮಲ್ಲಳ್ಳಿ ಜಲಪಾತ ವೀಕ್ಷಣೆಗೆÀ ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಿದ್ದು, ಅವರುಗಳಿಂದ ವಾಹನಕ್ಕೆ, ಪಾದಾಚಾರಿಗಳಿಗೆ ಎಂದು ಹೇಳಿ ವಿವಿಧ ತರದಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಶುಲ್ಕ ಸಂಗ್ರಹಿಸಲು ಲಕ್ಷಾಂತರ ರೂಪಾಯಿಗಳನ್ನು ಟೆಂಡರ್ ಮೂಲಕ ಪಡೆದಿರುವ ಸಂಬಂಧಪಟ್ಟ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವಾಹನಗಳ ನಿಲುಗಡೆಗೆ ಮಾತ್ರ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಮಾತ್ರವಲ್ಲ ವಾಹನಗಳ ನಿಲುಗಡೆಗೆ ಸೂಚನಾ ಫಲಕಗಳನ್ನು ಕೂಡ ಅಳವಡಿಸಿಲ್ಲ. ಇದರಿಂದಾಗಿ ಪ್ರವಾಸಿಗರು ಮುಖ್ಯರಸ್ತೆಯ ಎರಡೂ ಬದಿ ಎಲ್ಲೆಂದರಲ್ಲಿ
ವಾಹನಗಳನ್ನು ನಿಲುಗಡೆ ಮಾಡುತ್ತಿರುವದರಿಂದ ರಸ್ತೆಯಲ್ಲಿ ದಿನನಿತ್ಯ ಓಡಾಡುವ ಬಸ್‍ಗಳು, ಸ್ಥಳೀಯರ ವಾಹನಗಳ ಸಂಚಾರಕ್ಕೆ ಕಷ್ಟವಾಗಿದೆ.
ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವದರೊಂದಿಗೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.