ಮಡಿಕೇರಿ, ಡಿ.10 : ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರು ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕು ಮತ್ತು ಮಲೆಯಾಳಿ ಸಮಾಜದ ಕ್ಷಮೆ ಕೋರಬೇಕೆಂದು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಗೂರು ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಕೆ. ಸುಬ್ಬಯ್ಯ ಅವರು ವಿನಾಕಾರಣ ಮಲೆಯಾಳಿ ಹಾಗೂ ಬಿಲ್ಲವ ಸಮಾಜದ ನಡುವೆ ಒಡಕು ಮೂಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಇದೀಗ ಈ ಎರಡೂ ಸಮುದಾಯಕ್ಕೆ ಸೇರದ ವ್ಯಕ್ತಿಯ ಬಂಧನವಾಗಿದ್ದು, ಸುಬ್ಬಯ್ಯ ಅವರು ಮಲೆಯಾಳಿ ಜನಾಂಗದವರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಎ.ಕೆ. ಸುಬ್ಬಯ್ಯ ಅವರನ್ನು ಹಲ್ಲಿಲ್ಲದೆ ಭುಸುಗುಡುತ್ತಿರುವ ಹಾವೆಂದು ಟೀಕಿಸಿದರು. ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಮಸೀದಿಯಲ್ಲಿ ಕುರ್‍ಅನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‍ನ ಕಾರ್ಯಕರ್ತನೊಬ್ಬನ ಬಂಧನವಾಗಿದೆ. ಈತ ಮಲೆಯಾಳಿ ಅಥವಾ ಬಿಲ್ಲವ ಸಮಾಜಕ್ಕೆ ಸೇರಿದವನಲ್ಲ. ಈ ಹಿಂದೆ ಎ.ಕೆ.ಸುಬ್ಬಯ್ಯ ಅವರು ಎರಡು ಸಮಾಜಗಳ ನಡುವೆ ಒಡಕು ಮೂಡಿಸಲು ಯತ್ನಿಸಿದ್ದಾರೆ. ಜಿಲ್ಲೆಯಲ್ಲಿ ಮಲೆಯಾಳಿ ಸಮಾಜ ಎಲ್ಲಾ ಮೂಲ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಆದರೆ, ಸುಬ್ಬಯ್ಯ ಅವರು ಸಮಾಜದಲ್ಲಿ ಒಡಕು ಮೂಡಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ ಎಂದು ವಿ.ಕೆ. ಲೋಕೇಶ್ ಆರೋಪಿಸಿದರು.

ಪ್ರಗತಿಪರ ಚಿಂತಕರೆಂದು ಹೇಳಿಕೊಂಡು ಬಿಜೆಪಿಯನ್ನು ಟೀಕಿಸುವದನ್ನೆ ಅಜೆಂಡಾ ಮಾಡಿಕೊಂಡಿರುವ ಎ.ಕೆ.ಸುಬ್ಬಯ್ಯ, ಶ್ರದ್ಧಾ ಕೇಂದ್ರಗಳ ಬಗ್ಗೆ ಅವಹೇಳನ ಮಾಡುವದರಲ್ಲಿ ತೊಡಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ ಎಂದರು. ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಅಭಿನಂದನಾರ್ಹರು. ಅದೇ ರೀತಿಯಾಗಿ ಪದ್ಮನಾಭ ಅವರ ಕಾರನ್ನು ಸುಟ್ಟಿರುವ ಆರೋಪಿಗಳನ್ನು ಕೂಡ ತಕ್ಷಣ ಬಂಧಿಸಬೇಕೆಂದು ವಿ.ಕೆ. ಲೋಕೇಶ್ ಒತ್ತಾಯಿಸಿದರು.

ಹಿಂದೂ ಮಲೆಯಾಳಿ ಸಂಘÀದ ಮಡಿಕೇರಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಎ.ಕೆ.ಸುಬ್ಬಯ್ಯ ಅವರ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸಮುದಾಯವನ್ನು ಮೆಚ್ಚಿಸುವ ಉದ್ದೇಶದಿಂದ ಎ.ಕೆ. ಸುಬ್ಬಯ್ಯ ಮತ್ತು ವಿ.ಪಿ. ಶಶಿಧರ್ ಅವರುಗಳು ಟೀಕೆ ಮಾಡುವದರಲ್ಲೆ ಲಾಭ ಸಿಗುತ್ತದೆಂದು ನಂಬಿದ್ದಾರೆ. ಇತರ ಸಮುದಾಯಗಳಿಗೆ ನೋವನ್ನುಂಟು ಮಾಡುವ ಹೇಳಿಕೆಗಳು ಖಂಡನೀಯವೆಂದು ರಮೇಶ್ ಹೇಳಿದರು.

ನಗರಸಭಾ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಕೊಡಗಿನ ಜನರಿಗೂ, ಕೇರಳಕ್ಕೂ ಇರುವ ಸಂಬಂಧವನ್ನು ಕೇರಳದಲ್ಲಿರುವ ಬೈತೂರಪ್ಪ ದೇವಾಲಯದಲ್ಲಿ ನಡೆಯುವ ಆಚರಣೆಯನ್ನು ನೋಡಿ ಎ.ಕೆ. ಸುಬ್ಬಯ್ಯ ತಿಳಿಯಲಿ ಎಂದು ಹೇಳಿದರು. ಜನಾಂಗ ನಿಂದನೆಯನ್ನು ಮಲೆಯಾಳಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.

ನಗರಸಭಾ ಸದಸ್ಯ ಉಣ್ಣಿ ಕೃಷ್ಣನ್, ಬಿಜೆಪಿ ರಾಜ್ಯ ಸಮಿತಿ ಸಂಯೋಜಕ ಹರ್ಷವರ್ಧನ್ ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಸದಸ್ಯ ಎಸ್.ಎಲ್. ಜೀವನ್ ಉಪಸ್ಥಿತರಿದ್ದರು.